ನ್ಯೂಸ್

ಇಂದು ಐಐಎಚ್‌ಆರ್‌ ಹೆಸರಘಟ್ಟದಲ್ಲಿ ‘ಅರ್ಕಾ ಸಸ್ಯ ಮಾಲ್’ ಉದ್ಘಾಟನೆ

ಬೆಂಗಳೂರು: ಹೆಸರಘಟ್ಟದ ಭಾರತೀಯ ತೊಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ (ಐಐಎಚ್‌ಆರ್) ‘ಅರ್ಕಾ ಸಸ್ಯ ಮಾಲ್ (ನರ್ಸರಿ)’ ಸಹಿತ ಎಂಟು ಕಟ್ಟಡಗಳು ನಿರ್ಮಾಣಗೊಂಡಿದ್ದು, ಬುಧವಾರ (ಆ.30) ಉದ್ಘಾಟನೆಗೊಳ್ಳಲಿವೆ.

ಐಐಎಚ್‌ಆರ್ ನರ್ಸರಿ ಘಟಕವು 35 ಎಕರೆ ವಿಸ್ತೀರ್ಣ ಹೊಂದಿದ್ದು, ಮಾವು, ಪೇರಲ, ಸೀತಾಲ, ಚಕ್ಕೋತ, ಹಲಸು ಸೇರಿದಂತೆ ಸುಮಾರು 500 ಪ್ರಭೇದಗಳನ್ನು ಒಳಗೊಂಡಿರುವ ವಿವಿಧ ಬೆಳೆಗಳ ತಾಯಿಗಿಡಗಳ ಕ್ಷೇತ್ರವಿದೆ. ವಾರ್ಷಿಕ 5 ಲಕ್ಷ ಕಸಿ ಮಾಡಿದ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅಂದಾಜು 1.5 ಕೋಟಿ ರೂ. ಆದಾಯ ಗಳಿಸುತ್ತಿದೆ. ಸಸಿಗಳ ಕಸಿಗೆಂದೇ 3 ಪಾಲಿಹೌಸ್, 2 ಶೈತ್ಯಾಗಾರ, 4 ಸಸ್ಯ ಹೊಂದಾಣಿಕೆ ಕೋಣೆಗಳು ಹಾಗೂ 2 ಪ್ರಸರಣ ಘಟಕಗಳಿವೆ. ಈ ಎಲ್ಲ ಸೌಲಭ್ಯಗಳಿಂದ ನರ್ಸರಿಯನ್ನು ಹೈಟೆಕ್ ಆಗಿ ಅಭಿವೃದ್ಧಿಪಡಿಸಲಾಗಿದೆ.

ಇದೇ ರೀತಿ ಡ್ರ್ಯಾಗನ್ ಹಣ್ಣಿನ ಉತ್ಕೃಷ್ಟತಾ ಕೇಂದ್ರವನ್ನು ಸಿದ್ಧಪಡಿಸಲಾಗಿದೆ. ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್​​ ಹಾರ್ಟಿಕಲ್ಚರ್ ಅಡಿಯಲ್ಲಿ ಡ್ರ್ಯಾಗನ್ ಹಣ್ಣಿನ ಇಳುವರಿ ಉತ್ಪಾದನೆಗಾಗಿ ತಂತ್ರಜ್ಞಾನ ಅಭಿವೃದ್ಧಿ, ಪ್ರಸರಣ ತಂತ್ರಗಳ ಪ್ರಮಾಣೀಕರಣ, ಕೊಯ್ಲು ನಂತರದ ನಿರ್ವಹಣೆ ಹಾಗೂ ಶೇಖರಣೆ ವಿಧಾನಗಳ ಅಳವಡಿಕೆಗೆ ಆದ್ಯತೆ ನೀಡಲಿದೆ. ಜತೆಗೆ ಕರ್ನಾಟಕ ವಿದೇಶಿ ಹಣ್ಣಿನ ಬೆಳೆಗಾರರ ಸಂಘದ (ಕೆಇಎಫ್​ಐ) ಮೂಲಕ ಡ್ರ್ಯಾಗನ್ ಹಣ್ಣು ಸೇರಿದಂತೆ ವಿದೇಶದ ವಿವಿಧ ತಳಿಯ ಹಣ್ಣು ಬೆಳೆಗಾರರಿಗೆ ವೇದಿಕೆ ಕಲ್ಪಿಸುವ ಕೇಂದ್ರ ಕೂಡ ಕಾರ್ಯಾಚರಿಸಲಿದೆ.

ಬೀಜ ಉತ್ಪಾದನಾ ಕೇಂದ್ರಕ್ಕೆ ಎಚ್‌ಎಎಲ್ ನೆರವು:

ಐಐಎಚ್‌ಆರ್ ವಾರ್ಷಿಕ 40 ಟನ್ ಸಾಮರ್ಥ್ಯದ ಬೀಜ ಉತ್ಪಾದನೆ ಮತ್ತು ಸಂಸ್ಕರಣಾ ಕೇಂದ್ರವನ್ನು ಹೊಂದಿದೆ. ಇದನ್ನು ದುಪ್ಪಟ್ಟುಗೊಳಿಸಲು ಎಚ್‌ಎಎಲ್ ಕಾರ್ಖಾನೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್) ಅಡಿಯಲ್ಲಿ 2.53 ಕೋಟಿ ರೂ. ನೆರವಿನೊಂದಿಗೆ ಹೊಸ ಕೇಂದ್ರವನ್ನು ನಿರ್ಮಿಸಲಾಗಿದೆ.

1.14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಣಬೆ ಬೀಜೋತ್ಪಾದನೆ ಹಾಗೂ ಬೆಳೆಗಾರರ ಸಾಮರ್ಥ್ಯ ಅಭಿವೃದ್ಧಿ ಕೇಂದ್ರ, 42.83 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತ ಸ್ನಾತಕೋತ್ತರ ವಿದ್ಯಾರ್ಥಿಗಳ ಭೋಜನಾಲಯ, 1.08 ಕೋಟಿ ರೂ. ವೆಚ್ಚದ ಸಸ್ಯ ಆರೋಗ್ಯಾಲಯವನ್ನು ಲೋಕಾರ್ಪಣೆಯಾಗಲಿವೆ ಎಂದು ಐಐಎಚ್‌ಆರ್ ಅಧಿಕಾರಿಗಳು ತಿಳಿಸಿದ್ದಾರೆ.