ಬೆಂಗಳೂರು: ಅಯೋಧ್ಯೆಯಲ್ಲಿ ಸೋಮವಾರ ನಡೆಯುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಕುಟುಂಬ ಸಮೇತರಾಗಿ ಅಯೋಧ್ಯೆಗೆ ತೆರಳಿದರು.
ದೇವೇಗೌಡರಿಗೆ ಪತ್ನಿ, ಪುತ್ರ ಹಾಗೂ ಮೊಮ್ಮಗ ಸಾಥ್ ನೀಡಿದ್ದಾರೆ. ಭಾನುವಾರ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಪ್ರೈವೆಟ್ ಜೆಟ್‌ನಲ್ಲಿ ದೇವೇಗೌಡರು ಪತ್ನಿ ಚನ್ನಮ್ಮ, ಪುತ್ರ ಎಚ್.ಡಿ. ಕುಮಾರಸ್ವಾಮಿ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಜತೆ ತೆರಳಿದರು.
ಆಯೋಧ್ಯೆಗೆ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ನಾನು, ನನ್ನ ಪತ್ನಿ, ಕುಮಾರಸ್ವಾಮಿ, ನಿಖಿಲ್ ಅಯೋಧ್ಯೆಗೆ ಹೋಗುತ್ತಿದ್ದೇವೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮ ಮಾಡುತ್ತಿರುವುದು ಅವರ ಪೂರ್ವ ಜನ್ಮದ ಪುಣ್ಯವಾಗಿದೆ. ಅವರಿಗೆ ಈ ಕೆಲಸ ಮಾಡುವ ಶಕ್ತಿಯೂ ಕೂಡ ಪೂರ್ವ ಜನ್ಮದ ಪುಣ್ಯದಿಂದಲೇ ಸಿಕ್ಕಿದೆ ಎಂದರು.
ಮೋದಿ ಅವರು ಶಿವ, ವಿಷ್ಣು ಪ್ರಾರ್ಥನೆ ಮಾಡಿದ್ದಾರೆ. ಅವರಿಗೆ ಶಿವ, ವಿಷ್ಣು ವ್ಯತ್ಯಾಸ ಇಲ್ಲ. ಹಿಂದಿನ ಜನ್ಮದಲ್ಲಿ ದೊಡ್ಡ ದೈವ ಭಕ್ತರಾಗಿ ಜನ್ಮ ತಾಳಿದ್ದರು ಅನ್ನಿಸುತ್ತದೆ. ಈ ಸಂಧರ್ಭದಲ್ಲಿ ಆ ಯೋಗ ಮೋದಿ ಅವರಿಗೆ ಬಂದಿದೆ. 11 ದಿನ ವೃತ ಮಾಡಿದ್ದಾರೆ. ಪುಣ್ಯ ಕ್ಷೇತ್ರಗಳ ಸ್ನಾನ ಮಾಡುತ್ತಿದ್ದಾರೆ. ನಾನು ದೈವಭಕ್ತ. ಒಂದು ದಿನ ವ್ರತ ಮಾಡಬಹುದು. ಆದರೆ ಮೋದಿಯವರಂತೆ ಮಾಡಲು ಆಗುವುದಿಲ್ಲ. ತಮ್ಮ ನಿತ್ಯದ ಕೆಲಸ ಕಾರ್ಯಗಳ ಜತೆ ವ್ರತ ಮಾಡ್ತಾರೆ. ಇದೊಂದು ದೊಡ್ಡ ವಿಶೇಷವಾಗಿದೆ. ಮೋದಿ ಅವರಿಗೆ ಇದು ಪೂರ್ವ ಜನ್ಮದ ಪುಣ್ಯ. ವಿಶ್ವದಲ್ಲಿ ಇದೊಂದು ದಾಖಲೆ ಎಂದು ಹೇಳಿದರು.
ಈ ವೇಳೆ ನಾನು ರಾಜಕೀಯ ಮಾತನಾಡುವುದಿಲ್ಲ. ಪವಿತ್ರ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗವಹಿಸಬೇಕು. ನಮ್ಮಲ್ಲಿ ಶೃಂಗೇರಿ, ಪೇಜಾವರ ಮಠ ಸೇರಿ ನೂರಾರು ಮಠಗಳು ಇವೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಎಲ್ಲ ದೇವರು ನಂಬಿದ್ದೇವೆ. ಜನರು ವ್ಯತ್ಯಾಸ ತೋರಿಸೋದಿಲ್ಲ. ರಾಜ್ಯದ ಜನರಿಗೆ ನಾನು ತಲೆ ಬಾಗಿ ನಮಸ್ಕಾರ ಮಾಡುತ್ತೇನೆ ಎಂದು ದೇವೇಗೌಡ ಹೇಳಿದರು.