Boyfriend : ಇಂದಿನ ವೇಗದ ಡಿಜಿಟಲ್ ಯುಗದಲ್ಲಿ, ನಿಜವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮತ್ತು ಬೆಳೆಸುವುದು ನಿಜಕ್ಕೂ ಒಂದು ಸವಾಲಾಗಿ ಪರಿಣಮಿಸಿದೆ. ಯಾರು ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದಿನ ಜನರು ಇಲ್ಲ. ಹೀಗಾಗಿ ಎಲ್ಲ ಸಂಬಂಧಗಳನ್ನು ಅನುಮಾನದಿಂದಲೇ ನೋಡುವ ಒಂದು ಅಭ್ಯಾಸ ಗೊತ್ತಿಲ್ಲದೇ ಜನರಲ್ಲಿ ಬೇರೂರಿದೆ. ಅದರಲ್ಲೂ ಮೊಬೈಲ್ನಂತಹ ಸಾಧನಗಳು ಬಂದ ಮೇಲೆ ಮನುಷ್ಯ ವಾಸ್ತವ ಲೋಕದಿಂದಲೇ ಬೇರ್ಪಟ್ಟಿದ್ದಾನೆ. ಹೀಗಾಗಿ ಇಂದು ಅನೇಕ ಮಂದಿ ಒಂಟಿತನ ಅನುಭವಿಸುತ್ತಿದ್ದಾರೆ. ಅಲ್ಲದೆ, ಅದನ್ನು ನಿಭಾಯಿಸಲು ಹೊಸ ಹೊಸ ಮಾರ್ಗಗಳನ್ನು ಸಹ ಪ್ರಯತ್ನಿಸುತ್ತಿದ್ದಾರೆ.
ಕೆಲವರು ತಮ್ಮ ಒಡನಾಡಿಯನ್ನು ಹುಡುಕಲು ಹಣವನ್ನು ಖರ್ಚು ಮಾಡಲು ಸಹ ಸಿದ್ಧರಿದ್ದಾರೆ. ವಿಶೇಷವಾಗಿ ಜಪಾನ್‌ನಂತಹ ದೇಶಗಳಲ್ಲಿ, 'ರೆಂಟ್-ಎ-ಬಾಯ್‌ಫ್ರೆಂಡ್' ಮತ್ತು 'ರೆಂಟ್-ಎ-ಗರ್ಲ್‌ಫ್ರೆಂಡ್' ನಂತಹ ಸೇವೆಗಳು ಇದೀಗ ಜನಪ್ರಿಯವಾಗುತ್ತಿವೆ. ಹೀಗಿರುವಾಗ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದಿರುವ ಒಂದು ವಿಚಿತ್ರ ಘಟನೆ ಇದೀಗ ಮುನ್ನೆಲೆಗೆ ಬರುತ್ತಿದೆ.
ಟೋಕಿಯೋದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಆಸ್ಟ್ರೇಲಿಯಾದ ಸಾರಾ ಎಂಬಾಕೆ ತನ್ನ ಒಂಟಿತನವನ್ನು ನಿಭಾಯಿಸಲು ವಿಭಿನ್ನ ಪ್ರಯತ್ನ ಮಾಡಿದ್ದಾಳೆ. ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಒಂಟಿಯಾಗಿದ್ದ ಸಾರಾ, ಒಮ್ಮೆ ಬಾಡಿಗೆಗೆ ಬಾಯ್ಫ್ರೆಂಡ್ಗಳನ್ನು ನೀಡುವ ವೆಬ್‌ಸೈಟ್ ಅನ್ನು ನೋಡಿದರು. ಆ ಬಗ್ಗೆ ಯೋಚನೆ ಮಾಡಿದ ಸಾರಾ, ವೆಬ್‌ಸೈಟ್ ಮೂಲಕ 26 ವರ್ಷದ ನರುಮಿ ಹೆಸರಿನ ಯುವಕನ ಜೊತೆ ಎರಡು ಗಂಟೆಗಳ ಡೇಟ್ ಬುಕ್ ಮಾಡಿದಳು.
ನರುಮಿ ಜೊತೆ ಎರಡು ಗಂಟೆಗಳ ಡೇಟಿಂಗ್ ವೆಚ್ಚ 150 ಪೌಂಡ್ ಅಂದರೆ, ಭಾರತೀಯ ಕರೆನ್ಸಿಯಲ್ಲಿ ಸುಮಾರು 18,000 ರೂಪಾಯಿ. ಇದರಲ್ಲಿ ಯಾವುದೇ ಹೆಚ್ಚುವರಿ ವೆಚ್ಚಗಳು ಸೇರಿಲ್ಲ. ಅಂದಹಾಗೆ, ಇದೊಂದು ದುಬಾರಿ ವ್ಯವಹಾರವಾಗಿದ್ದರು ಕೂಡ ನರುಮಿಯೊಂದಿಗೆ ಕಳೆದ ಕ್ಷಣಗಳನ್ನು ಎಂದಿಗೂ ಮರೆಯಲಾಗದು ಎಂದು ಸಾರಾ ಹೇಳಿದ್ದಾರೆ. ಅದೊಂದು ಅದ್ಭುತ ಅನುಭವ ಅಂತಾನೂ ತಿಳಿಸಿದ್ದಾರೆ.
ಇನ್ನು ಇಬ್ಬರು ಭೇಟಿಯಾಗುವ ಮೊದಲು, ನರುಮಿ ಆಕೆಯನ್ನು "ನನ್ನ ಪ್ರಿಯೆ" ಮತ್ತು "ನನ್ನ ರಾಣಿ" ಎಂದು ಕರೆಯುತ್ತಾ ಪ್ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದನು. ಈ ಎಲ್ಲ ವಿಚಾರಗಳನ್ನು ಸ್ವತಃ ಸಾರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಯುವಕನಿಗೆ ನಿಜವಾಗಿಯೂ ಯಾರೊಂದಿಗೆ ಹೇಗೆ ವರ್ತಿಸಬೇಕೆಂದು ಚೆನ್ನಾಗಿ ತಿಳಿದಿದೆ ಎಂದು ಸಾರಾ ಹೇಳಿದ್ದಾರೆ.
ಇದೇ ವೇಳೆ ತನ್ನ ವೃತ್ತಿ ಬಗ್ಗೆ ಮಾತನಾಡಿರುವ ನರುಮಿ, 2024ರ ಜನವರಿಯಿಂದ ಈ ಕೆಲಸ ಮಾಡುತ್ತಿದ್ದೇನೆ. ಪ್ರತಿದಿನ ಕನಿಷ್ಠ ಹತ್ತು ಮಹಿಳೆಯರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಅವರಲ್ಲಿ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ವಿವಾಹಿತ ಮಹಿಳೆಯರು. ಡೇಟಿಂಗ್ ಮಾಡುವುದೇ ಪೂರ್ಣ ಸಮಯದ ಉದ್ಯೋಗವಾಗಿದೆ. ಹೀಗಾಗಿ ನಾನು ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಕಳೆಯುತ್ತೇನೆ ಎಂದು ನರುಮಿ ಹೇಳಿದ್ದಾರೆ. ಇನ್ನು ನರುಮಿ ಅವರು ಆಗಾಗ ಬುಕ್ ಮಾಡುವ ನಿಯಮಿತ ಗ್ರಾಹಕರನ್ನು ಸಹ ಹೊಂದಿದ್ದಾರೆ. ಈ ಎಲ್ಲ ಸಂಗತಿಯನ್ನು ಸಾರಾಳ ಯೂಟ್ಯೂಬ್ ಚಾನೆಲ್ ಮೂಲಕ ನರುಮಿ ಹೇಳಿಕೊಂಡಿದ್ದಾರೆ.
ಅಂದಹಾಗೆ, ಸಾರಾ ಅವರು ನರುಮಿಯನ್ನು ತನ್ನ ಗ್ರಾಹಕರಲ್ಲಿ ಯಾರನ್ನಾದರೂ ನಿಜವಾಗಿಯೂ ಪ್ರೀತಿಸುತ್ತಿದ್ದೀರಾ ಎಂದು ಕೇಳಿದಾಗ, ಆತ ಒಂದು ಕ್ಷಣ ಮೌನವಾದನು. ಆದರೆ, ನರುಮಿ ತನ್ನ ಅತಿ ಉದ್ದದ ಡೇಟ್ 50 ಗಂಟೆಗಳ ಕಾಲ ನಡೆಯಿತು ಎಂದರು. ಅಲ್ಲದೆ, ಒಂದು ವಾರದವರೆಗಿನ ಬುಕಿಂಗ್‌ಗಳನ್ನೂ ಸ್ವೀಕರಿಸಿದ್ದೇನೆ ಎಂದು ತಿಳಿಸಿದರು. ಸಾರಾಳ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿಯೂ ಗಮನ ಸೆಳೆಯುತ್ತಿದೆ. (ಏಜೆನ್ಸೀಸ್)