ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತ ವಿಚಾರಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ.ಪದ್ಮಪ್ರಸಾದ್, ಡಾ. ಶ್ರೀಪತಿ ಹಳಗುಂದ, ಡಾ. ಸುಂಕಂ ಗೋವರ್ಧನ, ಡಾ. ರತ್ನಾಕರ್ ಕುನುಗೋಡು, ಎನ್.ಹರಿಕುಮಾರ್, ಕೆ.ಎಸ್.ಸಿದ್ದಲಿಂಗಪ್ಪ ಇದ್ದರು. 
ನ್ಯೂಸ್

ಕೃತಿಗಳಲ್ಲಿದೆ ಭರವಸೆ, ಸತ್ಯಾನ್ವೇಷಣೆ: ಸಾಹಿತಿ ಡಾ. ಶ್ರೀಪತಿ ಹಳಗುಂದ

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ.ಪದ್ಮಪ್ರಸಾದ್ ಅವರ ಬರಹದಲ್ಲಿ ಕರುಳ ಸಂಬಂಧದ ಸೃಜನಶೀಲತೆಯನ್ನು ಕಾಣಬಹುದು ಎಂದು ಸಾಹಿತಿ ಹೊಸನಗರದ ಡಾ. ಶ್ರೀಪತಿ ಹಳಗುಂದ ಹೇಳಿದರು.

ಸಾಹಿತ್ಯ ಗ್ರಾಮದಲ್ಲಿ ಗುರುವಾರ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತ ಗೋಷ್ಠಿಯಲ್ಲಿ ಸೃಜನ ಸಾಹಿತ್ಯ ಕುರಿತು ಮಾತನಾಡಿ, ಸಾಹಿತಿ ಪದ್ಮಪ್ರಸಾದ್ ಅವರು ಹಲವು ಕೃತಿಗಳನ್ನು ರಚಿಸಿದ್ದು ಎಲ್ಲ ಕೃತಿಗಳಲ್ಲೂ ಬದಲಾವಣೆಗಳ ಭರವಸೆ, ಸತ್ಯಾನ್ವೇಷಣೆ ಇದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೆರಳಿಸುವ ಇಂದಿನ ದಿನಗಳಲ್ಲಿ ಅರಳಿಸುವ ಸಾಹಿತ್ಯ ಅವರದ್ದು. ಅವರ ಕವಿತೆಗಳಲ್ಲಿ ವಿವೇಕ, ವಿವೇಚನೆ ಕಾಣಬಹುದು. ರಾಗ ಸಂಯೋಜನೆ ಮಾಡಬಹುದಾಗಿವೆ. ಸಾತ್ವಿಕತೆ, ಶ್ರದ್ಧೆ ಮತ್ತು ವೈಚಾರಿಕತೆ ಅಡಗಿದೆ ಎಂದರು.
ಸಂಪಾದಿತ ಮತ್ತು ಅನುವಾದಿತ ಕೃತಿ ಕುರಿತು ಮಾತನಾಡಿದ ಸಾಹಿತಿ ಬೆಂಗಳೂರಿನ ಡಾ. ಸುಂಕಂ ಗೋವರ್ಧನ, ಸರಳತೆಯನ್ನು ಬದಿಗಿಟ್ಟು ವಿವರವಾಗಿ ಬರೆಯುವುದು ಪದ್ಮಪ್ರಸಾದ್ ಅವರ ವಿಶೇಷತೆಯಾಗಿದೆ. ಸಂಪಾದಿತ ಕೃತಿಗಳು ಸಾಹಿತ್ಯ ಲೋಕದಲ್ಲಿ ಗುರುತಿಸಿಗೊಂಡಿದ್ದು ಜೈನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಪರಂಪರೆಯ ಪ್ರತಿರೂಪ ಅವರ ಕೃತಿಯಲ್ಲಿ ಕಾಣಬಹುದು. ಹಳಗನ್ನಡದ ಹಲವು ಕೃತಿಗಳನ್ನು ವಿಮರ್ಶೆ ಮಾಡಿದ್ದು ಗ್ರಂಥ ಸಂಪಾದನೆಗೆ ಅವರು ಮಾದರಿ. ನೂರಕ್ಕೂ ಹೆಚ್ಚು ಕೃತಿ ಬರೆದಿರುವ ಅವರು ಅಧ್ಯಾಯನ ಪ್ರಿಯರು. ಕನ್ನಡ ಸಾಹಿತ್ಯ ಲೋಕದ ನಿಷ್ಟಾವಂತ ಅನುವಾದಕರು ಮತ್ತು ಸಂಪಾದಕರು ಎಂದರು.
ಅಂಕಣ ಬರಹ, ವಿಮರ್ಶೆ, ಜಾನಪದ ಕೃತಿಗಳ ಕುರಿತು ಸಾಹಿತಿ ರಿಪ್ಪನ್‌ಪೇಟೆಯ ಡಾ. ರತ್ನಾಕರ್ ಕುನುಗೋಡು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎನ್.ಹರಿಕುಮಾರ್ ಮುಖ್ಯ ಅತಿಥಿಯಾಗಿದ್ದರು. ಕಸಾಪ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.