ಸೋಮವಾರಪೇಟೆ: ಸರ್ಕಾರದ ಸಾಮಾಜಿಕ ಸಮೀಕ್ಷೆಯಲ್ಲಿ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡವರು ಸಮೀಕ್ಷೆಯ ಧರ್ಮ ಕಾಲಂನಲ್ಲಿ ಕೊಡವ ಧರ್ಮ ಎಂದು ದಾಖಲಿಸಬೇಕು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ ಹೇಳಿದರು.
ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಕೈಲ್ ಮುಹೂರ್ತ ಅಂಗವಾಗಿ ಅಯೋಜಿಸಿದ್ದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊಡವ ಧರ್ಮವನ್ನು ಅಧಿಕೃತಗೊಳಿಸಲು ಈ ಸಮೀಕ್ಷೆ ಸಹಕಾರಿಯಾಗಿದೆ. ಪ್ರತ್ಯೇಕ ಧರ್ಮದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಕೊಡವ ಧರ್ಮ ಸ್ಥಾಪನೆ ಬಗ್ಗೆ ಚಿಂತಿಸಬೇಕು. ಹಾಗಾದಾಗ ಸರ್ಕಾರದಿಂದ ಸೌಲಭ್ಯ, ಮೀಸಲಾತಿ, ಸಹಾಯಧನ ಪಡೆಯಲು ಸಾಧ್ಯ ಎಂದರು.
ಕೊಡವ ಸಮುದಾಯದವರು ಶಿಸ್ತಿನ ಜೀವನಕ್ಕೆ ಹೆಸರಾದವರು. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗವುದು ನಮ್ಮ ಜವಾಬ್ದಾರಿಯಾಗಿದೆ. ಕಟ್ಟೆಮಾಡು ವಿಚಾರದಲ್ಲಿ ಹಿಂದೂ ಸಮಾಜದ ಸಂಘಟನೆಗಳು ಕೊಡವರ ನೆರವಿಗೆ ಬಂದಿಲ್ಲ. ಈಗ ಎಲ್ಲೆಡೆ ನೆಲೆಸಿರುವ ಕೊಡವರು. ನಾವು ಹಿಂದೂ ಆಚರಣೆ ಮಾಡುತ್ತಿದ್ದರೂ ನಮ್ಮ ಗುರುತು ಬೇರೆಯಾಗಿದೆ. ಈ ನಿಟ್ಟಿನಲ್ಲಿ ಕೊಡವ ಧರ್ಮ ಎಂದು ಸಮೀಕ್ಷೆಯಲ್ಲಿ ದಾಖಲಿಸುವುದನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಹಿಂದು ಸಂಪ್ರದಾಯದಂತೆ ಕೊಡವರು ಬದುಕು ನಡೆಸುತ್ತಿದ್ದಾರೆ. ದೇವರ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದೇವೆ. ಇದೀಗ ಕೆಲವರು ಸಮೀಕ್ಷೆಯ ಧರ್ಮ ಕಾಲಂನಲ್ಲಿ ಕೊಡವ ಎಂದು ಇನ್ನು ಕೆಲವರು ಹಿಂದೂ ಎಂದು ನಮೂದಿಸಲು ಹೇಳುತ್ತಿದ್ದಾರೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು ಎಂದರು.
ಇತಿಹಾಸ ತಿಳಿಯದೇ ಏಕಾಏಕಿ ಧರ್ಮ ಬದಲಾವಣೆ ಮಾಡಬಾರದು ಎಂಬುದು ಸೋಮವಾರಪೇಟೆ ಕೊಡವ ಸಮಾಜದ ನಿರ್ಣಯವಾಗಿದೆ ಎಂದರು. ಟಿಪ್ಪು ಕೊಡವರ ಮೇಲೆ ಧಾಳಿ ಮಾಡಿದ ಸಂದರ್ಭ ನಮ್ಮ ಪೂರ್ವಜರೊಂದಿಗೆ ಇದ್ದಿದ್ದು ಹಿಂದೂ ಸಮಾಜದವರೇ ಎಂಬುದನ್ನು ಮನಗಾಣಬೇಕು. ರಾಜಕೀಯ ರಹಿತವಾಗಿ ಚರ್ಚೆ ಆಗಬೇಕು ಎಂದು ಅಭಿಮತ ವ್ಯಕ್ತಪಡಿಸಿದ ಅಭಿಮನ್ಯುಕುಮಾರ್, ಕೊಡವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಯುವ ಜನಾಂಗ ಗಂಭೀರವಾಗಿ ಯೋಚಿಸಬೇಕು ಎಂದರು.
ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್, ವೀರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಇದ್ದರು.
ನಂತರ ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.