ಮಾಜಿ ಸಿಎಂ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.  
ನ್ಯೂಸ್

ಸಂಕಷ್ಟಗಳ ನಡುವೆ ಅರಸು ಸಾಧನೆ ಅನನ್ಯ

ಚಿಕ್ಕಮಗಳೂರು: ದೇವರಾಜ ಅರಸು ಅವರ ಮುಂದಾಲೋಚನೆಯಿಂದಲೇ ಬಡವರು ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ಸ್ವಾವಲಂಬಿ ಜೀವನ ನಡೆಸಬಹುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಭಾನುವಾರ ಆಯೋಜಿಸಿದ್ದ ಮಾಜಿ ಸಿಎಂ ದಿ. ದೇವರಾಜ ಅರಸು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅರಸು ನಡೆದು ಬಂದ ದಾರಿ ಸುಲಭವಾಗಿರಲಿಲ್ಲ. ಹಿಂದುಳಿದ ವರ್ಗದಲ್ಲಿ ಜನಿಸಿ, ಸಂಕಷ್ಟಗಳ ನಡುವೆಯೂ ಅನೇಕ ಸಾಧನೆ ಮಾಡಿದ್ದಾರೆ. ಮಹಾರಾಜರ ಕಾಲದಲ್ಲಿ ಸರ್ಕಾರಿ ನೌಕರಿ ತ್ಯಜಿಸಿ ಕೃಷಿ, ಹೈನೋದ್ಯಮದಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು. ಅವರು ರಾಜಕೀಯ ಪ್ರವೇಶಿಸಿದ ಮೇಲೆ ರಾಜ್ಯದ ಭವಿಷ್ಯ ಬದಲು ಮಾಡಲು ಸಾಧ್ಯವಾಯಿತು ಎಂದರು.
1946ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ನಡೆದ ಚುನಾವಣೆ ಸಾರ್ವಜನಿಕ ಬದುಕಿಗೆ ಪ್ರವೇಶ ಮಾಡುವ ಅವಕಾಶ ದೊರಕಿಸಿತು. ಆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿಯಾಗಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಘೋಷಿಸಿತು. ಅವರ ಬಳಿ ಠೇವಣಿ ಪಾವತಿಸಲೂ ಹಣ ಇರಲಿಲ್ಲ. ಜನತೆಯೇ ಚುನಾವಣಾ ವೆಚ್ಚ ಮಾಡಿ ಗೆಲ್ಲಿಸಿಕೊಂಡರು. ಶಾಸಕರಾದರೂ ಕೃಷಿ ಕೆಲಸಗಳನ್ನು ಬಿಟ್ಟಿರಲಿಲ್ಲ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಅಧಿಕಾರ ಹಂಚಿಕೆಯಲ್ಲಿ ಬದಲಾವಣೆಗಳು ತಂದಿದ್ದು ದೇವರಾಜ ಅರಸು. ಹಾಗಾಗಿ ಹಿಂದುಳಿದ ವರ್ಗದವರಿಗೆ ರಾಜಕೀಯ ಅವಕಾಶಗಳು ಒದಗಿಬರುತ್ತಿವೆ. 1973ರಲ್ಲಿ ಮೈಸೂರು ಸಾಮ್ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು.
ಕೃಷಿ ಆಸಕ್ತಿ: ದೇವರಾಜ ಅರಸು ಅವರು ಮಹಾರಾಜರ ಆಡಳಿತ ಅವಧಿಯಲ್ಲೇ ಪದವಿ ಮುಗಿಸಿದ್ದರು. ಮನಸ್ಸು ಮಾಡಿದ್ದರೆ ಉನ್ನತ ಹುದ್ದೆ ಅಲಂಕರಿಸಬಹುದಿತ್ತು. ಆದರೆ ಕೃಷಿಯಲ್ಲಿ ತೊಡಗಿಸಿಕೊಂಡರು ಎಂದು ಪತ್ರಕರ್ತ ತಿಪ್ಪೇರುದ್ರಪ್ಪ ತಿಳಿಸಿದರು. ಉಪನ್ಯಾಸ ನೀಡಿದ ಅವರು, ಪದವಿ ಪಡೆದಿರುವ ಮೈಸೂರು ಮಹಾರಾಜರಿಗೆ ವಿಷಯ ತಿಳಿಸಲು ಹೋಗಿದ್ದಾಗ ಏನಾಗಬೇಕಿತ್ತು ಅಂತ ಕೇಳಿದ್ದರು. ಏನು ಬೇಡ, ವಿಚಾರ ಹೇಳಲಿಕ್ಕೆ ಬಂದಿದ್ದೇನೆ ಎಂದು ಮನೆಗೆ ವಾಪಸಾಗಿದ್ದರಂತೆ. ಆನಂತರ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು ಅನೇಕ ಸುಧಾರಣೆ ಜಾರಿಗೆ ತಂದರು ಹೇಳಿದರು.
ನಗರಸಭೆ ಸದಸ್ಯ ಮಧುಕುಮಾರ್‌ರಾಜ್ ಅರಸ್, ಡಿಸಿ ಸಿ.ಎನ್.ಮೀನಾ ನಾಗರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಸೋಮಶೇಖರ್, ಪೌರಾಯುಕ್ತ ಬಸವರಾಜ್, ಮುಖಂಡ ರಾಧಕೃಷ್ಣ, ವಕೀಲ ಅನಿಲ್‌ಕುಮಾರ್, ಮಂಜೇಗೌಡ ಇತರರಿದ್ದರು.