ನವದೆಹಲಿ: ನೆಟ್ಫ್ಲಿಕ್ನಲ್ಲಿ ಇತ್ತೀಚೆಗೆ ಸ್ಟ್ರೀಮಿಂಗ್ ಆದ ಅನುಭವ್ ಸಿನ್ಹಾ ನಿರ್ದೇಶನದ ’IC 814’ ವೆಬ್ ಸರಣಿಯಲ್ಲಿ ಸರಣಿಯಲ್ಲಿ ಉಗ್ರರ ಹೆಸರನ್ನು ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ವಿವಾದದಲ್ಲಿ ಸಿಲುಕಿದೆ. ಈ ಸಿರೀಸ್ ಬಗ್ಗೆ ಅಪಸ್ವರಗಳು ಬರುತ್ತಿದ್ದಂತೆ ಎಚ್ಚೆತ್ತಕೊಂಡ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಂಸ್ಥೆಯ ಭಾರತದ ಕಂಟೆಂಟ್ ಹೆಡ್ ಮೋನಿಕಾ ಶೆರ್ಗಿಲ್ ಅವರಿಗೆ ಸಮನ್ಸ್ ಜಾರಿ ಮಾಡಿ ಮಂಗಳವಾರ(ಸೆಪ್ಟೆಂಬರ್ 3) ಹಾಜರಾಗುವಂತೆ ಸೂಚಿಸಿತ್ತು.
ಇಂದು ನಡೆದ ಸಭೆಯಲ್ಲಿ ಮೋನಿಕಾ ಶೆರ್ಗಿಲ್ ಅವರು ಇನ್ನು ಮುಂದೆ ನೆಟ್ಫಿಕ್ಸ್ನಲ್ಲಿ ಪ್ರಸಾರವಾಗುವ ಯಾವುದೇ ವಿಷಯವನ್ನು ಮೊದಲೆ ಪರಿಶೀಲಿಸುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲ ಇಲಾಖೆಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇನ್ನು ಮುಂದೆ ರಾಷ್ಟ್ರದ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುವ ಯಾವುದೇ ವಿಷಯಗಳನ್ನು ಸ್ಟ್ರೀಮಿಂಗ್ ಮಾಡುವುದಿಲ್ಲ. ಭವಿಷ್ಯದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಇಂತಹ ವಿಷಯಗಳು ರಾಷ್ಟ್ರದ ಭಾವನೆಗಳಿಗೆ ಅನುಗುಣವಾಗಿರುತ್ತವೆ ಎಂದು ಮೋನಿಕಾ ಶೆರ್ಗಿಲ್ ಖಾತರಿಪಡಿಸಿರುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ.
ಸರಣಿಯಲ್ಲಿ ಹೈಜಾಕರ್ಗಳ ನಿಜವಾದ ಹೆಸರನ್ನು ಸ್ಪಷ್ಟವಾಗಿ ತೋರಿಸಲು ಯಾವುದೇ ಶೀರ್ಷಿಕೆಗಳು ಅಥವಾ ರೈಡರ್‌ಗಳನ್ನು ಏಕೆ ನೀಡಲಾಗಿಲ್ಲ. ಅಲ್ಲದೆ ಭಯೋತ್ಪಾದಕರು ತುಂಬಾ ದೌರ್ಬಲ್ಯದಂತೆ ಕಾಣುತ್ತಿರುವುದು ಏಕೆ ಎಂದು ಮೋನಿಕಾ ಅವರನ್ನು ಸರ್ಕಾರ ಕೇಳಿರುವುದಾಗಿ ತಿಳಿಸಿದೆ.
ಸಮನ್ಸ್ ನೀಡುವ ಮೊದಲು ಸರ್ಕಾರವು, ಈ ದೇಶದ ಜನರ ಭಾವನೆಗಳೊಂದಿಗೆ ಆಟವಾಡುವ ಹಕ್ಕು ಯಾರಿಗೂ ಇಲ್ಲ. ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಗೌರವಿಸಬೇಕು. ಯಾವುದನ್ನಾದರೂ ತಪ್ಪಾಗಿ ಚಿತ್ರಿಸುವ ಮೊದಲು ಯೋಚಿಸಬೇಕು. ಏಕೆಂದರೆ ಅದನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 29ರಂದು ರಿಲೀಸ್ ಆದ IC-814: ಕಂದಹಾರ್ ಹೈಜಾಕ್ ವೆಬ್ ಸರಣಿ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದೆ. ಈ ಸೀರಿಸ್ 1999ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ವಾಸ್ತವವಾಗಿ ನೇಪಾಳದ ಕಠ್ಮಂಡುವಿನಿಂದ ನವದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ ಸಂಖ್ಯೆ ಐಸಿ 814 ಅನ್ನು ಭಯೋತ್ಪಾದಕರು ಹೈಜಾಕ್ ಮಾಡಿದ್ದರು. ಈ ವಿಮಾನವನ್ನು ವಿವಿಧ ಸ್ಥಳಗಳ ಮೂಲಕ ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ಯಲಾಗಿತ್ತು.
ಹೈಜಾಕ್ ಆಗಿದ್ದ ವಿಮಾನದಲ್ಲಿದ್ದ ಪ್ರಯಾಣಿಕರ ಪ್ರಾಣಕ್ಕೆ ಬದಲಾಗಿ ಭಯೋತ್ಪಾದಕರ ಬೇಡಿಕೆಗಳನ್ನು ಭಾರತ ಸರ್ಕಾರವು ಒಪ್ಪಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಭಾರತೀಯ ಜೈಲಿನಲ್ಲಿದ್ದ ಮೌಲಾನಾ ಮಸೂದ್ ಅಜರ್, ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಎಂಬ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡುವುದು ಈ ಬೇಡಿಕೆಗಳಲ್ಲಿ ಒಂದಾಗಿತ್ತು. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಈ ಮೂವರು ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರಿಲೀಸ್ ಆಗಿರುವ ವೆಬ್ ಸರಣಿಯಲ್ಲಿ ಅಪಹರಣಕಾರರು ಘಟನೆಯ ಉದ್ದಕ್ಕೂ ತಮ್ಮ ನಿಜವಾದ ಹೆಸರುಗಳ ಬದಲಿಗೆ ಕೋಡ್ ಹೆಸರನ್ನು ಬಳಸುತ್ತಾರೆ. ಅಲ್ಲದೆ ಈ ಅಪಹರಣದಲ್ಲಿ ISI ಪಾಲ್ಗೊಳ್ಳಿವಿಕೆ ಇಲ್ಲ ಎಂಬುದನ್ನು ಬಿಂಬಿಸಲಾಗಿದೆ. ವೆಬ್ಸರಣಿಯಲ್ಲಿ ಭಯೋತ್ಪಾದಕರೊಂದಿಗಿನ ಮಾತುಕತೆಯನ್ನು ಕಾಮಿಡಿಯಾಗಿ ತೋರಿಸಲಾಗಿದೆ. ವರದಿ ಪ್ರಕಾರ ಅಪಹರಣಕಾರರ ನಿಜವಾದ ಹೆಸರುಗಳು ಇಬ್ರಾಹಿಂ ಅಥರ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಇಬ್ರಾಹಿಂ, ಶಾಹಿದ್ ಅಖ್ತರ್ ಮತ್ತು ಸೈಯದ್ ಶಾಕಿರ್ ಆಗಿದೆ.ಆದರೆ ಸರಣಿಯಲ್ಲಿ ಬರ್ಗರ್, ಚೀಫ್, ಶಂಕರ್ ಮತ್ತು ಭೋಲಾ ಎಂನ ಕೋಡ್ ಹೆಸರನ್ನು ಬಳಸಿದ್ದಾರೆ.
ಈ ಕಾರಣದಿಂದಾಗಿ ಜನರು ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದು, ನೆಟ್‌ಫ್ಲಿಕ್ಸ್-ಬಾಲಿವುಡ್ ಅನ್ನು ಬಹಿಷ್ಕರಿಸಿ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಆರಂಭಿಸಿದರು.(ಏಜೆನ್ಸೀಸ್)