ನ್ಯೂಸ್

ಪಂಚಾಯತ್ ಭವನದಲ್ಲೇ ಹಾರಿತು ಗುಂಡು; ರೇಷನ್​ ವಿಚಾರಕ್ಕೆ ನಡೆಯಿತು ಕೊಲೆ...

ರೇಷನ್​ ಅಂಗಡಿಗಳ ವಿಚಾರವಾಗಿ ಗಂಭೀರವಾಗಿ ನಡೆದ ವಾದ-ವಿವಾದ ಕೊನೆಗೆ ಗುಂಡು ಹಾರಿಸುವ ಹಂತಕ್ಕೆ ಹೋಗಿದ್ದು, ಒಬ್ಬನ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಜಯಪ್ರಕಾಶ್​ ಎಂಬ 46 ವರ್ಷದ ವ್ಯಕ್ತಿ ಇದರಲ್ಲಿ ಹತ್ಯೆಗೀಡಾಗಿದ್ದು, ಧೀರೇಂದ್ರ ಸಿಂಗ್​ ಎಂಬಾತ ಗುಂಡು ಹಾರಿಸಿದ್ದ.

ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ರಿಯೊಟಿ ಪ್ರದೇಶದ ದುರ್ಜನ್​ಪುರ್ ಗ್ರಾಮದಲ್ಲಿ ಪಡಿತರ ಅಂಗಡಿಗಳ ಆಯ್ಕೆ ಕುರಿತು ಪಂಚಾಯತ್ ಭವನದಲ್ಲಿ ನಡೆದ ಸಭೆ ವೇಳೆ ಈ ಕೃತ್ಯ ನಡೆದಿದೆ. ಸ್ವಸಹಾಯ ಸಂಘಗಳ ವಿವಾದದಿಂದ ರದ್ದಾಗಿದ್ದ ರೇಷನ್​ ಶಾಪ್​ಗಳ ಕುರಿತು ಆಯೋಜಿಸಲಾಗಿದ್ದ ಸಭೆ ಸಂದರ್ಭ ದೊಡ್ಡ ಮಟ್ಟದಲ್ಲಿ ನಡೆದಿದ್ದ ವಾಗ್ವಾದವೇ ಇದಕ್ಕೆ ಕಾರಣ.

ಹತ್ಯೆಗೀಡಾದವನ ಸಹೋದರ ನೀಡಿದ ದೂರಿನ ಮೇರೆಗೆ 15ರಿಂದ 20 ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆಗಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್​ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ತಿಳಿಸಿದ್ದಾರೆ. (ಏಜೆನ್ಸೀಸ್​)