ನ್ಯೂಸ್

ಮುಕ್ತರಲ್ಲಿ, ಮುಮುಕ್ಷುಗಳಲ್ಲಿ, ವಿವಿಧ ಸ್ತರಗಳು

 ಯಾರು ಅಧ್ಯಾತ್ಮ ಜೀವನದಲ್ಲಿ ತಮ್ಮನ್ನೇ ತಾವು ಮುಳುಗಿಸಿಕೊಂಡಿರುವರೋ ಅವರು ತಮ್ಮ ಸಾಧನಾ ಪಥದಲ್ಲಿ ಕ್ರಮೇಣ ಹಲವು ಸ್ತರಗಳನ್ನು ಏರುತ್ತಾ ಅಂತ್ಯದಲ್ಲಿ ಭಗವದ್ದರ್ಶನ ಪಡೆದು ಮುಕ್ತಿಯನ್ನು ಪಡೆಯುತ್ತಾರೆೆ. ಈ ವಿಚಾರಗಳು ಅತ್ಯಂತ ಸೂಕ್ಷ್ಮ. ಸಾಧನೆಯ ಪಥದಲ್ಲಿ ಅಹರ್ನಿಶಿ ಪಥಿಸುವವನೇ ನಿಜವಾದ ಸಾಧಕ. ಅಂದರೆ ಸಾಮಾನ್ಯ ಮಾನವ ಸಾಧನೆಯ ಪಥವನ್ನು ಹಿಡಿದು ಪಥಿಸುತ್ತಾ ಮುಂದೆ ಸಾಗಿದಲ್ಲಿ ಅನೇಕ ರೀತಿಯ ಅಂತಸ್ತುಗಳನ್ನು ದಾಟಬೇಕಾಗುತ್ತದೆ. ಈ ವಿಚಾರವನ್ನು ಅರ್ಥೈಸಿಕೊಳ್ಳಲು ಭಗವಾನ್ ಶ್ರೀ ರಾಮಕೃಷ್ಣರ ‘ವಚನವೇದ’ವನ್ನು ಅಧ್ಯಯನ ಮಾಡಬೇಕಾಗುತ್ತದೆ.

ಅದೊಂದು ದಿನ ಭಕ್ತನೊಬ್ಬ ಪರಮಹಂಸರಿಗೆ ಹೀಗೆ ಪ್ರಶ್ನೆ ಹಾಕುತ್ತಾನೆ: ಪೂಜ್ಯರೇ, ಭಗವಂತನ ಸಾಕ್ಷಾತ್ಕಾರ ಎಂದರೇನು? ಭಗವಂತನ ದರ್ಶನ ಎಂಬುದು ಏನು? ಅದನ್ನು ಪಡೆದುಕೊಳ್ಳುವ ಬಗೆ ಹೇಗೆ?. ರಾಮಕೃಷ್ಣರು, ಮುಮುಕ್ಷುಗಳಲ್ಲಿ ಮತ್ತು ಮುಕ್ತರಲ್ಲಿ ವಿವಿಧ ಅಂತಸ್ತಿನವರು ಇದ್ದಾರೆ. ಪ್ರವರ್ತಕರು, ಸಾಧಕರು, ಸಿದ್ದರು, ಸಿದ್ದರ ಸಿದ್ದರು ಎಂದು ನಾಲ್ಕು ಪಂಗಡದ ಅಧ್ಯಾತ್ಮ ಜೀವಿಗಳನ್ನು ತಿಳಿಸುತ್ತಾರೆ. ರಾಮಕೃಷ್ಣರ ಮಾತಿನಲ್ಲಿ ತಿಳಿಸುವುದಾದರೆ; ಯಾರು ಈಗ ತಾನೆ ಅಧ್ಯಾತ್ಮ ಮಾರ್ಗಕ್ಕೆ ಇಳಿದಿದ್ದಾನೋ, ಆತನೇ ಪ್ರವರ್ತಕ, ಎಂದರೆ ಆರಂಭಿಕ. ಅಧ್ಯಾತ್ಮದ ಅರಿವು ಮೂಡಿದೆ, ಇನ್ನು ಅದರ ಅರ್ಥವನ್ನು ಕ್ರಮೇಣ ಕ್ರಮೇಣವಾಗಿ ಅರಿಯುವುದು ಎಂದು. ಈ ಅರಿವನ್ನು ಪಡೆದುಕೊಳ್ಳಲು ಸಾಧನೆ, ಭಜನೆ ಮಾಡುತ್ತಾ, ಪೂಜೆ, ಜಪ, ಧ್ಯಾನ, ಭಗವನ್ನಾಮ ಸಂಕೀರ್ತನೆ ಮಾಡುತ್ತಿರುವವನೇ ಸಾಧಕ. ಹಾಗಾದರೆ ಸಿದ್ಧ ಎಂದು ಯಾರಿಗೆ ಕರೆಯಲಾಗುತ್ತದೆ? ಯಾರು ಭಗವಂತನಿದ್ದಾನೆ ಎಂಬುದನ್ನು ತನ್ನ ಸ್ವಂತ ಅನುಭವದಿಂದ ಅರಿತುಕೊಂಡಿದ್ದಾನೋ, ಅವನೇ ಸಿದ್ಧ. ಇದರ ಆಂತರ್ಯದ ಅರ್ಥವನ್ನು ರಾಮಕೃಷ್ಣರು ಉದಾಹರಣೆಯೊಂದರ ಮೂಲಕ ನೀಡುತ್ತಾರೆ. ಸುತ್ತ ಅಂಧಕಾರ. ಮನೆಯಲ್ಲಿ ಆತ ಮಲಗಿದ್ದಾನೆ, ಮತ್ತೊಬ್ಬ ಆತನನ್ನು ಕತ್ತಲೆಯಲ್ಲೇ ತಡವರಿಸಿಕೊಂಡು ಹುಡುಕುತ್ತಿದ್ದಾನೆ. ಒಂದು ಸುಖಾಸನವನ್ನು ಮುಟ್ಟಿ ಕೈ ಹಾಕಿದಾಗ ಇದಲ್ಲ, ಕಿಟಕಿಗೆ ಕೈಹಾಕಿ ಹೇಳುತ್ತಾನೆ; ಇದಲ್ಲ. ಬಾಗಿಲಿಗೆ ಕೈ ಹಾಕಿ ಹೇಳುತ್ತಾನೆ; ಇದಲ್ಲ. ನೇತಿ, ನೇತಿ ಅಂತಲೇ ಮುಂದುವರಿಯುತ್ತಿದ್ದಾನೆ. ಕೊನೆಗೆ ಯಾರನ್ನು ತೀವ್ರವಾಗಿ ಹುಡುಕುತ್ತಿದ್ದನೋ ಆ ಯಜಮಾನರ ಶರೀರಕ್ಕೆ ಕೈ ತಾಗುತ್ತದೆ. ಆಗ ಹೇಳುತ್ತಾನೆ; ಓ, ಇಲ್ಲೇ ಇದ್ದಾರೆ ಯಜಮಾನರು!. ಅಂದರೆ ತನ್ನ ಯಜಮಾನ ಇರುವುದರ ಅನುಭವ ಆತನಿಗೆ ಬಂತು. ಯಜಮಾನನೇನೋ ಆತನ ಕೈಗೆ ಸಿಕ್ಕಿದ, ಆದರೆ ಆತನನ್ನು ಸಂಪೂರ್ಣವಾಗಿ ಅರಿತಿಲ್ಲ. ಈ ರೀತಿಯಲ್ಲಿ ಮೂರೂ ಸ್ತರದ ಸಾಧಕರನ್ನು ವಿವರಿಸುತ್ತಾರೆ. ಪರಮಹಂಸರ ನುಡಿಗಳಲ್ಲಿ; ಇನ್ನೊಂದು ಅಂತಸ್ತಿನವರಿದ್ದಾರೆ, ಅವರಿಗೆ ಸಿದ್ಧರ ಸಿದ್ಧರು ಎಂಬುದಾಗಿ ಹೆಸರು. ಭಗವಂತನೊಡನೆ ವಿಶೇಷ ರೀತಿಯಾಗಿ ಭಕ್ತಿ, ಪ್ರೇಮಗಳ ಹಿನ್ನೆಲೆಯಾಗಿ ಸಂಭಾಷಿಸಿದರೆ, ಆಗ ಅನುಭವ ಆಗಿಬಿಡುತ್ತದೆ ಎಂದು ತಿಳಿಸುತ್ತಾ, ಸಿದ್ಧ ಪುರುಷನಾದವನು ಭಗವಂತನ ಸಾಕ್ಷಾತ್ಕಾರವನ್ನೇನೋ ಮಾಡಿಕೊಂಡಿದ್ದಾನೆ. ಆದರೆ ಸಿದ್ಧರ ಸಿದ್ಧ ಭಗವಂತನೊಡನೆ ವಿಶೇಷ ರೀತಿಯಾಗಿ ಸಂಭಾಷಿಸುತ್ತಾ ಭಗವದಾನಂದದಲ್ಲಿ ಮುಳುಗಿರುತ್ತಾನೆ ಎನ್ನುತ್ತಾರೆ.

ಪರಮಹಂಸರು ಅಧ್ಯಾತ್ಮ ಜೀವನ ನಡೆಸುವವರಲ್ಲಿಯೂ ನಾಲ್ಕು ರೀತಿಯ ಜನರು ಇರುತ್ತಾರೆ ಎಂದು ವಿವರಿಸಿದ್ದಾರೆ. ಸಾಧನೆಯ ಪಥದಲ್ಲಿರುವವರು ಈ ನಾಲ್ಕು ವಿಭಾಗಗಳಲ್ಲಿ ಯಾವ ಭಾಗದಲ್ಲಿ ಸೇರುತ್ತೇವೆ ಎಂಬುದನ್ನು ಅರಿಯಬೇಕು. ಪ್ರವರ್ತಕರೇ ಅತಿ ಹೆಚ್ಚಿನ ಸಂಖ್ಯೆಯವರು. ಕಾರಣ, ಜೀವನದಲ್ಲಿ ಸಾಕಷ್ಟು ಅನುಭವಿಸಿ ಅಂತ್ಯದಲ್ಲಿ ಬೇರೇನೂ ದಾರಿಯಿಲ್ಲ ಎಂದು ಅರಿತಾಗಲೇ ಭಗವಂತ, ಅಧ್ಯಾತ್ಮ, ಸಾಧನೆಗಳೆಂಬ ವಿಚಾರದಲ್ಲಿ ಆಸಕ್ತಿ ಹೊಂದುವುದು. ಒಮ್ಮೆ ಜ್ಞಾನದ ರಶ್ಮಿ ಇಂತಹ ಪ್ರಾಪಂಚಿಕರ ಮೇಲೆ ಬಿದ್ದಿತು ಎಂದಲ್ಲಿ ಆ ವ್ಯಕ್ತಿ ನಂತರದ ಹಂತವಾದ ಸಾಧಕನ ಮಟ್ಟಕ್ಕೆ ಪ್ರಯಾಣಿಸುತ್ತಾನೆ. ಆ ಸಂದರ್ಭದಲ್ಲಿ ಹರಿನಾಮದ ಸ್ಮರಣೆ, ದೇವಸ್ಥಾನ, ತೀರ್ಥಕ್ಷೇತ್ರಗಳ ದರ್ಶನ, ಸದ್ಗುರುವಿನ ಕೃಪೆಗಾಗಿ ಹಾತೊರೆಯುತ್ತಾ ನಂತರ ಕ್ರಮೇಣ ಅಧ್ಯಾತ್ಮದ ರುಚಿಯನ್ನು ಹೊಂದಿ ನಿಜವಾದ ಅರ್ಥದಲ್ಲಿ ಸಾಧಕ ಎನಿಸಿಕೊಳ್ಳುತ್ತಾನೆ. ಈ ಸ್ತರದಲ್ಲಿ ಸದಾ ಮನದಲ್ಲಿ ಭಗವಂತನ ಸ್ಮರಣೆ, ಜಪ, ಆರಾಧನೆ, ಭಜನೆಗಳಿಂದ ಕೂಡಿದವನಾಗಿ ಸಿದ್ಧಪುರುಷನಾಗಿ ಭಗವಂತನ ಅಸ್ತಿತ್ವವನ್ನು ಪೂರ್ಣವಾಗಿ ಅರಿಯುವುದಲ್ಲದೆ ಭಗವಂತನೊಂದಿಗೆ ಸಂಭಾಷಿಸಲೂ ಅರ್ಹನಾಗುತ್ತಾನೆ. ಈ ಸಿದ್ಧಯೋಗಿ ಕ್ರಮೇಣವಾಗಿ ಸಿದ್ಧರ ಸಿದ್ಧನಾಗಿ ಸದಾ ಭಗವದಾನಂದದಲ್ಲಿ ಮುಳುಗಿ ಬಾಹ್ಯ ಪ್ರಪಂಚದ ಪರಿಜ್ಞಾನವನ್ನೇ ಕಳೆದುಕೊಂಡು ಪರಮಹಂಸನಾಗಿ ನಿಜವಾದ ಅರ್ಥದಲ್ಲಿ ಸಿದ್ಧರ ಸಿದ್ಧ ಪುರುಷ ಎನಿಸಿಕೊಳ್ಳುತ್ತಾನೆ. ಇದೇ ರಾಮಕೃಷ್ಣರು ವಿವರಿಸಿದ ಅಧ್ಯಾತ್ಮ ಜೀವನದ ಪ್ರವರ್ತಕ, ಸಾಧಕ, ಸಿದ್ಧ, ಸಿದ್ಧರ ಸಿದ್ಧ ಎಂಬ ನಾಲ್ಕು ಸ್ತರಗಳು.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

(ಪ್ರತಿಕ್ರಿಯಿಸಿ: vvsudina@gmail.com, swajapa@gmail.com)