ನ್ಯೂಸ್

ಅತ್ತೆ-ಮಾವ ಬೈಕ್​ EMI ಕಟ್ಟದಿದ್ದಕ್ಕೆ ಮನನೊಂದು ಪ್ರಾಣ ಕಳೆದುಕೊಂಡ ಅಳಿಯ

ಪಟ್ನಾ: ವರದಕ್ಷಿಣೆಯಾಗಿ ನೀಡಲಾಗಿದ್ದ ಬೈಕ್​ ಇಎಂಐಅನ್ನು (EMI) ಅತ್ತೆ-ಮಾವ ಸರಿಯಾದ ಸಮಯಕ್ಕೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಪೂರ್ವ ಚಂಪಾರಣ್​ ಜಿಲ್ಲೆಯ ಭವಾನಿಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ದೀಪಕ್​ ಕುಮಾರ್​ ಪಾಸ್ವಾನ್​ (28) ಎಂದು ಗುರುತಿಸಲಾಗಿದ್ದು, ಮದುವೆ ಮಾರ್ಷಿಕೋತ್ಸವದ ದಿನದಂದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಸಂಜಯ್​ ಕುಮಾರ್ ಸಿಂಗ್​, ಬನ್ಮಂಖಿ ಮುನ್ಸಿಪಲ್ ಕೌನ್ಸಿಲ್ ವಾರ್ಡ್ ಸಂಖ್ಯೆ 21 ಪಾಸ್ವಾನ್ ಟೋಲಾದಲ್ಲಿ ಈ ಘಟನೆ ನಡೆದಿದೆ. ಮೃತ ದೀಪಕ್​ನ ಮಾವ ಒಂದು ವರ್ಷದ ಹಿಂದೆ ಅಳಿಯನಿಗೆ ವರದಕ್ಷಿಣೆಯಾಗಿ ಹೊಸ ಬೈಕ್ ಹಾಗೂ ನಗದ​ನ್ನು ನೀಡಿದ್ದರು.

ಅಳಿಯನಿಗೆ ನೀಡಲಾಗಿದ್ದ ಬೈಕ್​ಅನ್ನು ಲೋನ್​ ಮಾಡಿಸಿ ಖರೀದಿಸಿದ್ದರು. ಕಳೆದ ಮೂರು ತಿಂಗಳಿನಿಂದ ಕಂತನ್ನು (EMI) ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬ್ಯಾಂಕಿನ ಅಧಿಕಾರಿಗಳು ಬೈಕ್​ಅನ್ನು ಸೀಜ್​ ಮಾಡಿದ್ದರು. ಈ ವಿಚಾರವಾಗಿ ದೀಪಕ್​ ತನ್ನ ಅತ್ತೆ-ಮಾವನೊಂದಿಗೆ ಜಗಳವಾಡಿದ್ದ. ಬಳಿಕ ಪದೇ ಪದೇ ಕರೆ ಮಾಡಿ ಇಎಂಐ ಕಟ್ಟುವಂತೆ ಪೀಡಿಸುತ್ತಿದ್ದ. ಈ ವಿಚಾರವಾಗಿ ಹೆಂಡತಿಯನ್ನು ಥಳಿಸಿದ್ದ.

ಡಿಸೆಂಬರ್​ 09ರಂದು ಮಧ್ಯಾಹ್ನ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ ದೀಪಕ್​ ತುಂಬಾ ಹೊತ್ತು ಕಳೆದರು ಹೊರಗೆ ಬಾರದಿರುವುದನ್ನು ಕಂಡು ಕುಟುಂಬಸ್ಥರು ಬಾಗಿಲು ಮುರಿದು ಪರಿಶೀಲಿಸಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಸಂಜಯ್​ ಕುಮಾರ್ ಸಿಂಗ್ ತಿಳಿಸಿದ್ದಾರೆ.