ಕರೊನಾ, ಅಧಿಕಾರಿಗಳ ನಿರ್ಲಕ್ಷ್ಯ ಇನ್ನಿತರ ಕಾರಣಗಳಿಂದ 2020-21ನೇ ಸಾಲಿನಲ್ಲಿ ಸರ್ಕಾರ ನೀಡಿರುವ ರಾಜಸ್ವ ಸಂಗ್ರಹ ಗುರಿ ಮುಟ್ಟುವಲ್ಲಿ ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆ ಇಲಾಖೆಗಳು ವಿಫಲವಾಗಿದ್ದು, 10ರಿಂದ 15 ಸಾವಿರ ಕೋಟಿ ರೂ. ರಾಜಸ್ವ ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ.
ರಾಜಸ್ವ ಗುರಿ ಎಷ್ಟು?: 2020-21ನೇ ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 82,443 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಲಾಗಿತ್ತು. ಆದರೆ, ಫೆಬ್ರವರಿ ಅಂತ್ಯಕ್ಕೆ 71,833 ಕೋಟಿ ರೂ.ಸಂಗ್ರಹಿಸಿದೆ. ಇನ್ನೂ 10,610 ಕೋಟಿ ರೂ. ಸಂಗ್ರಹಿಸಬೇಕಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನೀಡಿದ್ದ 12,655 ಕೋಟಿ ರೂ. ಗುರಿಯಲ್ಲಿ 9,014 ಕೋಟಿ ರೂ. ಸಂಗ್ರಹಿಸಿದ್ದು, ಇನ್ನೂ 3,641 ಕೋಟಿ ರೂ.ಸಂಗ್ರಹಿಸಬೇಕಿದೆ. ಸಾರಿಗೆ ಇಲಾಖೆಗೆ 7,115 ಕೋಟಿ ರೂ. ಗುರಿಯಲ್ಲಿ ಜನವರಿ ಅಂತ್ಯಕ್ಕೆ 4,294 ಕೋಟಿ ರೂ.ಸಂಗ್ರಹಿಸಿದ್ದು, 2,821 ಕೋಟಿ ರೂ.ಕ್ರೋಢೀಕರಿಸಬೇಕಿದೆ.
ಇನ್ನು ಅಬಕಾರಿ ಇಲಾಖೆಗೆ ನೀಡಿದ 22,700 ಕೋಟಿ ರೂ.ಆದಾಯ ಗುರಿಯಲ್ಲಿ ಫೆಬ್ರವರಿ ಅಂತ್ಯಕ್ಕೆ 20,900 ಕೋಟಿ ರೂ. ಸಂಗ್ರಹಿಸಿದೆ. ಇನ್ನೂ 1,800 ಕೋಟಿ ರೂ. ಸಂಗ್ರಹಿಸಬೇಕಿದೆ. ಆದರೆ, ಮಾರ್ಚ್ ಅಂತ್ಯದವರೆಗೆ ಅಬಕಾರಿ ಇಲಾಖೆ ಈ ಆದಾಯವನ್ನು ಸಂಗ್ರಹಿಸಲಿದೆ.
ನಷ್ಟ ಹೇಗೆ?: ಕರೊನಾ ನಿಯಂತ್ರಿಸಲು ಲಾಕ್ಡೌನ್ ಹೇರಿದ್ದರಿಂದ ರಾಜಸ್ವ ಸಂಗ್ರಹಕ್ಕೆ ಹೊಡೆತ ನೀಡಿತು. ಲಾಕ್ಡೌನ್ ತೆರವು ಬಳಿಕ ಎಲ್ಲ ಕ್ಷೇತ್ರಗಳು ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ಆದಾಯ ಸಂಗ್ರಹಿಸಲು ಅಧಿಕಾರಿಗಳಂತೂ ವಿಫಲರಾಗಿದ್ದಾರೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಏಕಾಏಕಿ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಿದ್ದರಿಂದ ಸರ್ಕಾರಕ್ಕೆ ಬರಬೇಕಿದ್ದ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಯಿತು. ಸರ್ವರ್ ಸಮಸ್ಯೆಯಿಂದಾಗಿ ಅಗಾಗ್ಗೆ ಕೈಕೊಡುತ್ತಿರುವ ಕಾವೇರಿ ತಂತ್ರಾಂಶದಿಂದ ನೋಂದಣಿಗಳು ಸ್ಥಗಿತವಾಗಿರುವುದೂ ಸೇರಿ ಇನ್ನಿತರ ಕಾರಣಗಳಿಂದ ಆದಾಯ ಖೋತವಾಗುತ್ತಿದೆ. ಸಾರಿಗೆ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗೆ ಕರೊನಾದಿಂದಾಗಿ ನಿಗದಿತ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿಲ್ಲ.
ತೆರಿಗೆ ಗುರಿ ತಗ್ಗಿಸಿದ ಸರ್ಕಾರ: 2020-21ನೇ ಸಾಲಿನಲ್ಲಿ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಗೆ 82,443 ಕೋಟಿ ರೂ.ಗಳ (ಜಿಎಸ್ಟಿ ಪರಿಹಾರ ಒಳಗೊಂಡಂತೆ) ರಾಜಸ್ವ ಸಂಗ್ರಹ ಗುರಿ ನೀಡಲಾಗಿತ್ತು. ಆದರೆ, 2021-22ನೇ ಸಾಲಿನಲ್ಲಿ 76,473 ಕೋಟಿ ರೂ. ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಿದೆ.