ನ್ಯೂಸ್

ಅಭಿವೃದ್ಧಿ ಯೋಜನೆ ನಿಗಾಕ್ಕೆ ಉಸ್ತುವಾರಿ!; ಬಿಜೆಪಿ ವರಿಷ್ಠರ ಮಟ್ಟದಲ್ಲಿ ನಡೆದಿದೆ ಚಿಂತನೆ

| ಮೃತ್ಯುಂಜಯ ಕಪಗಲ್ ಬೆಂಗಳೂರು

ರಾಜ್ಯದ ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳ ಅನುಷ್ಠಾನದಲ್ಲಿ ವೇಗ ಮತ್ತು ಕ್ಷಮತೆ ಹೆಚ್ಚಿಸುವ ದೃಷ್ಟಿಯಿಂದ ಉಸ್ತುವಾರಿಯೊಬ್ಬರು ನೇಮಕವಾಗ ಲಿದ್ದಾರೆ! ಸರ್ಕಾರದ ವರ್ಚಸ್ಸು ವೃದ್ಧಿ, ಮುಂದಿನ ಚುನಾವಣೆ ಲೆಕ್ಕಾಚಾರದಿಂದ ಬಿಜೆಪಿ ವರಿಷ್ಠರು ಇಂಥದ್ದೊಂದು ಚಿಂತನೆ ನಡೆಸಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದಲೂ ಇದು ಪೂರಕ ಎಂಬುದು ವರಿಷ್ಠರ ಲೆಕ್ಕಾಚಾರ. ಕರ್ನಾಟಕ ರಾಜಕೀಯ ಸಹಿತ ಎಲ್ಲ ಮಗ್ಗುಲುಗಳನ್ನು ಬಲ್ಲ, ಅನುಭವಿ ಹೆಗಲಿಗೆ ಈ ಜವಾಬ್ದಾರಿ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ನಿಕಟವರ್ತಿಗಳೇ ಉಸ್ತುವಾರಿಗಳಾಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಅಧಿಕಾರಿಗಳು, ನೌಕರ ವರ್ಗದ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂಬುದು ಸಂಘ-ಪರಿವಾರ ಮೂಲದ ನಾಯಕರ ನಿಲುವಾಗಿದೆ. ಹೊಸಪೇಟೆಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದರು. ಅಧಿಕಾರಶಾಹಿ ಬಲವರ್ಧನೆ, ಶಕ್ತಿಯ ಸಮರ್ಪಕ ಬಳಕೆ ಮೇಲೆ ಬೆಳಕು ಚೆಲ್ಲಿದ್ದರು. ಇದರ ಭಾಗವಾಗಿ ಉಸ್ತುವಾರಿ ನೇಮಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರ ಮೇಲೂ ನಿಗಾ: ಪ್ರತಿಯೊಬ್ಬ ಸಚಿವರ ಕಾರ್ಯವೈಖರಿ ಬಗ್ಗೆ ಈವರೆಗೆ ತಮ್ಮದೇ ಮೂಲದಿಂದ ವರಿಷ್ಠರು ಮಾಹಿತಿ ತರಿಸಿಕೊಳ್ಳು ತ್ತಿದ್ದರು. ಮುಂದಿನ ದಿನಗಳಲ್ಲಿ ಉಸ್ತುವಾರಿ ನೇರ ನಿಗಾವಹಿಸಲಿದ್ದಾರೆ ಎನ್ನಲಾಗುತ್ತಿದೆ. ಮಿಷನ್ 150 ಸಂಕಲ್ಪಕ್ಕೆ ಪೂರಕ ವಾಗಿ ಹತ್ತು-ಹಲವು ಉಪಕ್ರಮ ಗಳು ವರಿಷ್ಠರ ಬತ್ತಳಿಕೆಯಲ್ಲಿದ್ದು, ಈ ಪೈಕಿ ಅಭಿವೃದ್ಧಿ ಉಸ್ತುವಾರಿ ನೇಮಕವೂ ಒಂದಾಗಿದೆ. ಆಡಳಿತಯಂತ್ರದ ಮೇಲಾಗುವ ಪರಿಣಾಮಗಳು, ಈ ಕ್ರಮದ ಸಾಧಕ- ಬಾಧಕದ ಕೂಲಂಕಷ ಚರ್ಚೆಯಾದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಉಸ್ತುವಾರಿ ಚಿಂತನೆಯಂತೂ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೊಸ ಕ್ರಮ ಯಾಕೆ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್​ನಲ್ಲಿ ಪ್ರಕಟಿಸಿದ ಎಲ್ಲ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಅರ್ಹರಿಗೆ ಸಕಾಲಕ್ಕೆ ಸರ್ಕಾರಿ ಸವಲತ್ತು ತಲುಪಿಸುವುದು ಉಸ್ತುವಾರಿ ನೇಮಕದ ಚಿಂತನೆಗೆ ಕಾರಣ. ಪಕ್ಷದ ಸಂಘಟನೆ, ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಉಸ್ತುವಾರಿಯಾಗಿದ್ದು, ಆಡಳಿತಾತ್ಮಕ ಉಸ್ತುವಾರಿಗೆ ಕೇಂದ್ರ ಸಚಿವರೊಬ್ಬರ ನೇಮಕ ಮಾಡುವ ಚರ್ಚೆ ಹಂತದಲ್ಲಿದೆ. ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮನ್ವಯಕ್ಕಾಗಿ ಸಮಿತಿ ರಚಿಸುವ ಯೋಚನೆಯಿತ್ತು. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಒಂದು ವರ್ಷ ಉಳಿದಿರುವ ಹಿನ್ನೆಲೆಯಲ್ಲಿ ಸಮಿತಿ ಬದಲು ಉಸ್ತುವಾರಿ ನೇಮಕಕ್ಕೆ ಹೆಚ್ಚಿನ ಒಲವು ಮೂಡಿದೆ. ಬಜೆಟ್​ನಲ್ಲಿ ಪ್ರಸ್ತಾಪಿಸಿದ ಯೋಜನೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಅನುಷ್ಠಾನಕ್ಕೆ ಪೂರಕವಾಗಿ ಒಂದು ತಿಂಗಳೊಳಗೆ ಆದೇಶ ಹೊರಬೀಳಲಿವೆ ಎಂದು ಬೊಮ್ಮಾಯಿ ಈಗಾಗಲೇ ತಿಳಿಸಿದ್ದಾರೆ.

ಸಂಬಂಧಿಸಿದ ಇಲಾಖೆಗಳು ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ ಸಮಿತಿಗೆ ನೀಡಿದ್ದಾರೆ. ಆದರೂ ಹಿಂದಿನ ಯೋಜನೆಗಳ ಅನುಷ್ಠಾನ, ಜನಾಭಿಪ್ರಾಯ ರೂಪಿಸುವಲ್ಲಿ ವಹಿಸಿದ ಪಾತ್ರದ ಬಗ್ಗೆ ದೆಹಲಿ ನಾಯಕರಿಗೆ ಸ್ಪಷ್ಟ ಅರಿವಿದ್ದು, ನಿರೀಕ್ಷೆಗೆ ತಕ್ಕಂತೆ ಸಾಕಾರಕ್ಕೆ ಆದ್ಯತೆ ನೀಡಿದ್ದಾರೆ. ಸಿಎಂ ಬೊಮ್ಮಾಯಿ ದೆಹಲಿ ಭೇಟಿ ವೇಳೆ ಉಸ್ತುವಾರಿ ನೇಮಕದ ಕುರಿತು ಸಂದೇಶ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.