Bihar Election: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ, ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷಗಳು ಸೀಟು ಹಂಚಿಕೆ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ, ಜಾರ್ಖಂಡ್ ಮುಕ್ತಿ ಮೋರ್ಚಾ 12 ಸ್ಥಾನಗಳನ್ನು ಬೇಡಿಕೆ ಇಟ್ಟಿರುವುದಾಗಿ ವರದಿಯಾಗಿದೆ.
ಬಿಹಾರದ ನೆರೆ ರಾಜ್ಯವಾದ ಜಾರ್ಖಂಡ್ನಲ್ಲಿ ಆಡಳಿತರೂಡ ಪಕ್ಷವಾಗಿರುವ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಮತ್ತು ಸಿಪಿಐ ಮೈತಿಕೂಟದಲ್ಲಿವೆ. 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟ ಸೇರುವ ಪ್ರಯತ್ನ ವಿಫಲವಾದ ನಂತರ ಜೆಎಂಎಂ ಸ್ಪರ್ಧಿಸಿದ ಐದು ಸ್ಥಾನಗಳಲ್ಲೂ ಹೀನಾಯ ಸೋಲು ಕಂಡಿತು. ಇತ್ತೀಚೆಗೆ ನಡೆದ ಜಾರ್ಖಂಡ್ ಚುನಾವಣೆಯಲ್ಲಿ ಜೆಎಂಎಂ, ಆರ್ಜೆಡಿಗೆ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು ಮತ್ತು ಅಧಿಕಾರಕ್ಕೇರಿದ ಬಳಿಕ ಸಂಪುಟ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನವನ್ನು ಹಂಚಿಕೆ ಮಾಡಿತ್ತು.
ಈ ಅಂಶವನ್ನು ಮುಂದಿಟ್ಟುಕೊಂಡ ಜೆಎಂಎಂ, ಇದೀಗ 12 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಎಂಎಂ ನಾಯಕರೊಬ್ಬರು, ಆರ್‌ಜೆಡಿ ನಮ್ಮ ಪಕ್ಷವನ್ನು ಮೈತ್ರಿಕೂಟದಲ್ಲಿ ಸೇರಿಸಿಕೊಳ್ಳುತ್ತದೆ ಮತ್ತು ಮುಂಬರುವ ಚುನಾವಣೆಯಲ್ಲಿ ನಮಗೆ ಅರ್ಹ ಸ್ಥಾನಗಳನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
ಮುಕ್ತಿ ಮೋರ್ಚಾದ ಬೇಡಿಕೆಯು ಮಹಾಘಟಬಂಧನ್‌ಗೆ ಟಿಕೆಟ್ ಹಂಚಿಕೆಯನ್ನು ಇನ್ನಷ್ಟು ಕಷ್ಟಕರವಾಗಿಸುವ ಸಾಧ್ಯತೆಯಿದ್ದು, ಕಾಂಗ್ರೆಸ್ 2020ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 70 ಸ್ಥಾನಗಳಿಗೆ ಈಗ ಮತ್ತೇ ಒತ್ತಾಯಿಸಿದೆ. ಆರ್‌ಜೆಡಿ ಕಾಂಗ್ರೆಸ್‌ಗೆ 55ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಇಲ್ಲ. ಇತ್ತೀಚೆಗೆ, ಪೂರ್ನಿಯಾ ಕ್ಷೇತ್ರದ ಪಕ್ಷೇತರ ಸಂಸದ ರಾಜೇಶ್ ರಂಜನ್, ಮೈತ್ರಿಕೂಟದಲ್ಲಿ ಜೆಎಂಎಂಗೂ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದು, ಹೇಮಂತ್ ಸೋರೆನ್ ನಾಯಕತ್ವದ ಬಗ್ಗೆ ಬಿಹಾರದ ಜನರಲ್ಲಿ ಒಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).