ನ್ಯೂಸ್

ಇಟಲಿಯ ನಗರದ ಚಿತಾಗಾರದಲ್ಲಿ ದಿನದ 24 ಗಂಟೆಯೂ ಕೆಲಸ: ಪತ್ರಿಕೆಯ 10 ಪುಟಗಳಲ್ಲಿ ಶ್ರದ್ಧಾಂಜಲಿ ಜಾಹೀರಾತು- ಇದು ಕರೊನಾ ಎಫೆಕ್ಟ್

ರೋಮ್​: ಕರೊನಾ ವೈರಸ್ Covid19 ಸೋಂಕು ಇಟಲಿಯನ್ನರನ್ನು ತೀವ್ರವಾಗಿ ಬಾಧಿಸಿದೆ. ಪರಿಣಾಮ, ಎಂದೂ ನಿರಂತರ ಕೆಲಸ ಮಾಡದೇ ಇದ್ದ ಚಿತಾಗಾರಗಳಲ್ಲಿ ದಿನದ 24 ಗಂಟೆ ಕಾಲ ಶವ ಸಂಸ್ಕಾರದ ಕೆಲಸಗಳು ನಡೆದಿವೆ. ನಗರದ ಎರಡು ಪ್ರಮುಖ ಆಸ್ಪತ್ರೆಗಳ ಶವಾಗಾರದಲ್ಲಿ ಶವಪೆಟ್ಟಿಗೆಗಳು ತುಂಬಿವೆ. ಚರ್ಚ್​ಗಳ ಸಿಮೆಟ್ರಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಸರದಿ ನಿಲ್ಲುವಂತಾಗಿದೆ. ಸ್ಥಳೀಯ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ನಿಧನವಾರ್ತೆಗಳ ಪ್ರಮಾಣ ಎರಡು ಮೂರು ಪುಟ ಇದ್ದಿದ್ದು 10 ಪುಟಗಳಿಗೆ ಏರಿಕೆಯಾಗಿದೆ.

ಬರ್ಗಾಮೋದ ಪ್ರಾಂತ್ಯದ ಉತ್ತರ ಭಾಗದಲ್ಲಿ ಕರೋನಾ ವೈರಸ್​ ಸೋಂಕಿನಿಂದಾಗಿ ಮರಣ ತಾಂಡವವಾಡುತ್ತಿದೆ. ಜನರನ್ನು ಆ್ಯಂಬುಲೆನ್ಸ್​ಗಳಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸುವ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಐಸೋಲೇಷನ್ ವಾರ್ಡ್​ಗಳ ಬಳಿ ಯಾರನ್ನೂ ಸುಳಿಯಲು ಬಿಡುತ್ತಿಲ್ಲ. ಹೀಗಾಗಿ ಸಂಬಂಧಿಕರು, ಗೊಂದಲ ಆತಂಕದ ನಡುವೆ ಹೊಯ್ದಾಡುತ್ತಿರುವ ದೃಶ್ಯವೂ ಸಾಮಾನ್ಯವಾಗಿದೆ. ಇನ್ನು ಮೃತಪಟ್ಟವರ ಅಂತ್ಯ ಸಂಸ್ಕಾರ ಸ್ಥಳದಲ್ಲಿ ಸಂಬಂಧ ಪಟ್ಟ ಪ್ರೀಸ್ಟ್​ ಮತ್ತು ಸಿಮೆಟ್ರಿಯ ಕೆಲಸಗಾರ ಮಾತ್ರವೇ ಇರಬೇಕೆಂಬ ಆದೇಶವೂ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಾರ್ತಾ ಟೆಸ್ಟಾ ಎಂಬ 43 ವರ್ಷದ ಮಹಿಳೆ ಸ್ವಯಂ ಐಸೋಲೇಷನ್​ಗೆ ಒಳಗಾಗಿದ್ದು, ಅವರ ತಂದೆ(85) ಬುಧವಾರ ನಿಧನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಗುಡ್​ಬೈ ಹೇಳುವುದಕ್ಕೆ ಕಾಯುತ್ತಿದ್ದೇವೆ ಆದರೆ, ಅವಕಾಶ ಇಲ್ಲ. ಇದೊಂಥರಾ ಯುದ್ಧಕ್ಕಿಂತಲೂ ಭೀಕರವಾದ ಸನ್ನಿವೇಶ ಎಂದು ಹೇಳಿಕೊಂಡಿದ್ದಾರೆ. ಇತರೆ ರಾಷ್ಟ್ರಗಳಲ್ಲಿ ಈ ಸೋಂಕು ಈಗಷ್ಟೇ ಆರಂಭವಾಗಿದ್ದು ಭೀಕರತೆ ಅರಿವಾಗುವುದು ತಡವಾದೀತು. ಮುನ್ನೆಚ್ಚರಿಕೆ ವಹಿಸಿದಷ್ಟೂ ಒಳಿತು ಎಂಬ ಮಾತುಗಳನ್ನೂ ಆಕೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)