ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಒಬ್ಬರು ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಗಳಿದ್ದಾರೆ. ಪಾಶ್ಚಿಮಾತ್ಯರಿಗೆ ಕ್ಯಾರೆ ಎನ್ನದೆ ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಭೂಪ ಯಾರು ಗೊತ್ತಾ?
ಬೇರೆ ಯಾರೂ ಅಲ್ಲ. ಇಮ್ರಾನ್ ಖಾನ್! ಇವರು ಹಕೀಕಿ ಆಝಾದಿ ಎನ್ನುವ ಮೆರವಣಿಗೆಯ ಪ್ರಾರಂಭದಲ್ಲಿ ಮಾಡಿದ ಭಾಷಣದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ್ದಾರೆ.
ಇತ್ತೀಚೆಗೆ ಕೀನ್ಯಾದಲ್ಲಿ ಪಾಕಿಸ್ತಾನದ ಪತ್ರಕರ್ತ ಓರ್ವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಇವರು ಪಾಕ್ನ ಸೇನಾಧ್ಯಕ್ಷರ ವಿರುದ್ಧ ದನಿ ಎತ್ತಿದ್ದರು. ಹೀಗಾಗಿ ಕೊಲೆಯ ಹಿಂದೆ ಸೇನೆಯ ಕೈವಾಡ ಇದೆ ಎಂಬ ಶಂಕೆ ಶುರುವಾಗಿದೆ. ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಇಮ್ರಾನ್ ಖಾನ್, ಭಾರತದ ಕಡೆ ಬೊಟ್ಟು ಮಾಡಿ ತಮ್ಮ ದೇಶದ ಜನರನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಇಮ್ರಾನ್ ಖಾನ್ 5 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಾಕಿಸ್ತಾನದ ಚುನಾವಣಾ ಆಯೋಗದಿಂದ ನಿಷೇಧಕ್ಕೆ ಒಳಗಾಗಿದ್ದರು. ಆದರೂ ರಾಜಕೀಯದಲ್ಲಿ ಸಕ್ರಿಯವಾಗಿರಲು ಮಾಡಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. (ಏಜೆನ್ಸೀಸ್)