ಹುಣಸೂರು ತಾಲೂಕು ತರೀಕಲ್ ರಂಗಯ್ಯನಕೊಪ್ಪಲು ಹಾಡಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಆಯೋಜಿಸಿದ್ದ ಲಲಿತಕಲಾ ಕಲಿಕಾ ಶಿಬಿರದಲ್ಲಿ ತಾವೇ ತಯಾರಿಸಿದ ವಿವಿಧ ಆಕೃತಿಗಳೊಂದಿಗೆ ವಿದ್ಯಾರ್ಥಿಗಳು ಸಂಭ್ರಮಿಸಿದರು. ಡಾ.ಎಸ್.ಶ್ರೀಕಾಂತ್, ಮುರಳೀಧರ್, ಹುಸೇನಿ, ಶೋಭಾರಾನಿ, ಗಿರಿಜಾ ಇತರರಿದ್ದರು. 
ನ್ಯೂಸ್

ಕಾಗದ ಕತ್ತರಿ ಕಲೆಯಿಂದ ಏಕಾಗ್ರತೆ, ಸ್ಮರಣ ಶಕ್ತಿ ವೃದ್ಧಿ

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಚ್.ವಿ.ಮುರಳಿಧರ್ ಅಭಿಮತ

ಹುಣಸೂರು : ತಾಲೂಕಿನ ತರೀಕಲ್ ರಂಗಯ್ಯನಕೊಪ್ಪಲು ಹಾಡಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಗುರುವಾರ ಲಲಿತಕಲಾ ಕಲಿಕಾ ಉಚಿತ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಚ್.ವಿ.ಮುರಳಿಧರ್ ಮತ್ತು ಎಸ್.ಎಫ್.ಹುಸೇನಿ ತೂಗುದೀಪ ತಯಾರಿಕೆ ಕುರಿತು, ಕಿರೀಟ, ಕಾಗದದಿಂದ ಮಡುವ ಸಮರೂಪ, ರೇಖಾಗಣಿತದ ತ್ರಿಭುಜ, ಆಯತ ಮುಂತಾದ ಆಕಾರಗಳನ್ನು ತಯಾರಿಸುವ ಕುರಿತು ತರಬೇತಿ ನೀಡಿದರು.

ಈ ವೇಳೆ ಮಾತನಾಡಿದ ಮುರಳೀಧರ್, ಕಾಗದ ಕತ್ತರಿ ಕಲೆಯು ಮಕ್ಕಳ ಶೈಕ್ಷಣಿಕ ಕಲಿಕೆಗೆ ಸೃಜನ ಶೀಲತೆ, ಕ್ರಿಯಾಶೀಲತೆ ಹೊರಹೊಮ್ಮಲು ಇದು ಉತ್ತಮ ಮಾಧ್ಯಮವಾಗಿದೆ. ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ ಮತ್ತು ಸ್ಮರಣ ಶಕ್ತಿ ವೃದ್ಧಿಸುತ್ತದೆ. ಕಾಗದ ಕತ್ತರಿ ಕಲೆಯಿಂದ ತಾಳ್ಮೆ ಜತೆಗೆ ಒತ್ತಡ ನಿವಾರಣೆಗೆ ಸಹಕಾರಿ. ಈ ಕಲೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಬೆರಳ ತುದಿಯನ್ನು ಫಿಸಿಯೋಥೆರಪಿಯಾಗಿ ಬಳಸುವುದರಿಂದ ಮಿದುಳು ಚುರುಕಾಗಿ ಕಾರ್ಯ ನಿರ್ವಹಿಸಲಿದೆ. ಕಾಗದ ಕತ್ತರಿಕಲೆಯ ವಿನ್ಯಾಸಗಳನ್ನು ತೋರಿಸಿ ಬಟ್ಟೆ ಹಾಗು ವಸ್ತುಗಳ ಮೇಲೆ ಮುದ್ರಿಸಲು ಒತ್ತುಕಲೆಯಾಗಿ ಬಳಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಕಾಗದ ಕತ್ತರಿ ಕಲೆಯಿಂದ ಬಿಡುವಿನ ಸಮಯದಲ್ಲಿ ಮಕ್ಕಳು ತಮ್ಮದೇ ಆದ ವಿಭಿನ್ನ ವಿನ್ಯಾಸಗಳ ಕಲ್ಪನೆ-ರಚನೆ, ಏಕಾಗ್ರತೆ, ತಾಳ್ಮೆಯಿಂದ ಕಲಾಕೃತಿಗಳ ರಚನೆ, ಕರಕುಶಲ ಕಲೆಗಳ ಬಗ್ಗೆ ಅರಿವು-ಮಾಹಿತಿ ಹೊಂದಲು ಕಾಗದ ಕತ್ತರಿಕಲೆಯು ಸಹಕಾರಿ ಎಂದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಎಸ್.ಎಫ್.ಹುಸೇನಿ ಮಾತನಾಡಿ, ಒತ್ತಡವೇ ತುಂಬಿರುವ ಈ ಜಗತ್ತಿನಲ್ಲಿ ಕಲೆಯೇ ಒತ್ತಡವನ್ನು ಕಳೆಯುವ ಸಾಧನ.ಕಾಗದ ಕತ್ತರಿಕಲೆಯು ಕೇವಲ ಮಕ್ಕಳಿಗಾಗಿ ಸೀಮಿತವಾಗಿರದೆ ಎಲ್ಲ ವಯೋಮಾನದವರನ್ನು ಚುಂಬಕದ ರೀತಿ ಆಕರ್ಷಿಸುವ ಕಲೆಯಾಗಿದೆ ಎಂದರು.

ಕಲಾ ಶಿಬಿರದಲ್ಲಿ ತರಿಕಲ್ ರಂಗಯ್ಯನ ಕೊಪ್ಪಲು, ಹಳ್ಳದ ಕೊಪ್ಪಲು, ತೆಕ್ಲ ಹಾಡಿ, ಉದ್ದೂರ್ ಹಾಡಿಯ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಪ್ರಕಾಶ್, ವಿಠಲ್ ನಾಣಚ್ಚಿ, ಗಿರಿಜಾ, ಶಿವಣ್ಣ, ಮಹದೇವ್, ಸಣ್ಣಯ್ಯ, ಶಾಲಾ ಶಿಕ್ಷಕ ವೃಂದದ ಮೇನಕಾ, ನವೀನ, ಶೋಭರಾಣಿ, ಮನುಕುಮಾರ್, ಹೆಚ್ ಎಂ. ಹೆನ್ರಿಟ ಹಾಗೂ ಮೈಸೂರಿನ ಎನ್ ಐ ಇ ಕಾಲೇಜಿನ ಶಿವು, ಡಾ. ಚಂದ್ರಶೇಖರ್ ಇತರರು ಹಾಜರಿದ್ದರು.