ಶೃಂಗೇರಿಯಲ್ಲಿ ಆಯೋಜಿಸಿದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬೇಗಾನೆ ವಿವೇಕ್ ಅವರು ಕಂಪಾನಿಯೋ ಮುಖ್ಯಸ್ಥ ರತ್ನಾಕರ್ ಶೆಟ್ಟಿ ಅವರನ್ನು ಗೌರವಿಸಿದರು. ಡಿ.ಸಿ.ಶಂಕರಪ್ಪ, ಭಾರ್ಗವಿ, ಶಶಿಕಾಂತ್, ಕೆ.ಸಿ.ರಮೇಶ್ ಇದ್ದರು.  
ನ್ಯೂಸ್

ಫೂಟ್ ಪಲ್ಸ್ ಥೆರಪಿಯಿಂದ ರಕ್ತಸಂಚಾರ ಸರಾಗ

ಶಿವಕುಮಾರ ಎಸ್.ಪಿ.

ಶೃಂಗೇರಿ: ರಕ್ತ ಪರಿಚಲನೆ ಮತ್ತು ನರಗಳಿಗೆ ಸಂಬಂಧಿಸಿದ ಯಾವುದೇ ದೀರ್ಘಕಾಲಿಕ ಸಮಸ್ಯೆಗಳ ಪರಿಹಾರಕ್ಕೆ ಫೂಟ್ ಪಲ್ಸ್ ಥೆರಪಿ ಚಿಕಿತ್ಸೆ ಸಹಕಾರಿ ಎಂದು ಕಂಪಾನಿಯೋ ಸಂಸ್ಥೆ ಮುಖ್ಯಸ್ಥ ರತ್ನಾಕರ್ ಶೆಟ್ಟಿ ಹೇಳಿದರು.

ಲಯನ್ಸ್ ಕ್ಲಬ್ ಮತ್ತು ಸಂಸ್ಥೆ ಆಶ್ರಯದಲ್ಲಿ ಭಾನುವಾರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಕೇವಲ 15 ದಿನಗಳ ಚಿಕಿತ್ಸೆ ಪಡೆದರೆ ಶುಗರ್, ಬಿಪಿ, ಸ್ನಾಯುಸೆಳೆತ, ಸಂದಿವಾತ, ನಿದ್ರಾಹೀನತೆ, ಬೆನ್ನು ನೋವು, ಮಂಡಿನೋವು, ಪಾರ್ಶ್ವವಾಯು, ಥೈರಾಯ್ಡ ಸೇರಿ ಇನ್ನಿತರೆ ನರಗಳಿಗೆ ಸಂಬಂಧಿಸಿದ ಹಲವು ರೋಗಗಳಿಂದ ಗುಣಮುಖರಾಗಬಹುದು ಎಂದರು.
ಅರ್ಧ ತಾಸು ಚಿಕಿತ್ಸೆ ಪಡೆದರೆ 5 ಕಿ.ಮೀ.ವರೆಗೆ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಈ ಚಿಕಿತ್ಸೆ ಸಹಕಾರಿಯಾಗುತ್ತದೆ. ನರ ರೋಗಗಳಿಗೆ ಸಂಬಂಧಿಸಿ ಸಣ್ಣ ಮತ್ತು ದೀರ್ಘಕಾಲಿಕ ಸಮಸ್ಯೆಗಳನ್ನು ಔಷಧರಹಿತವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪರಿಹರಿಸಬಹುದು. ಪ್ರತಿಯೊಬ್ಬರೂ ಉಚಿತವಾಗಿ ಚಿಕಿತ್ಸೆ ಪಡೆಯಬೇಕು ಎಂಬುದು ಸಂಸ್ಥೆ ಮುಖ್ಯ ಉದ್ದೇಶ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬೇಗಾನೆ ವಿವೇಕ್ ಮಾತನಾಡಿ, ಕಂಪಾನಿಯೋ ಸಂಸ್ಥೆ ಸಹಕಾರದಿಂದ ಆರೋಗ್ಯ ರಕ್ಷಣೆಗೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ಲಯನ್ಸ್ ಸಂಸ್ಥೆ ರೂಪಿಸುತ್ತಿದೆ. ಆರೋಗ್ಯ, ರಕ್ತದಾನ, ನೇತ್ರ ಚಿಕಿತ್ಸೆ ಮತ್ತಿತರ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಕಂಬಳಗದ್ದೆ ಮಂಜುನಾಥ್, ಸತೀಶ್ ಭಟ್, ಕೆ.ಎಂ.ಶ್ರೀನಿವಾಸ್, ಡಿ.ಸಿ.ಶಂಕರಪ್ಪ, ಭಾರ್ಗವಿ ವಿವೇಕ್, ಪ್ರಮುಖರಾದ ಶಶಿಕಾಂತ್, ವಸಂತ್ ಇದ್ದರು.