ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗಿ ಕೋರ್ಟ್‌ನಿಂದ ಉದ್ಘೋಷಣೆ ಆಗಿದ್ದರೂ ಮೋಜಿನ ಜೀವನ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬನೇರುಘಟ್ಟ ರಸ್ತೆಯ ಅರೆಕೆರೆಯ ನಿವಾಸಿ ಜಬಿವುದ್ದೀನ್ ಮತ್ತು ಜಯನಗರದ ಮಹಮ್ಮದ್ ಮೆಹತಾಬ್ ಬಂಧಿತರು. ನಗರದ 33 ಪೊಲೀಸ್ ಠಾಣೆಗಳಲ್ಲಿ ಜಬಿವುದ್ದೀನ್ ವಿರುದ್ಧ 73 ಕೇಸ್ ದಾಖಲಾಗಿದ್ದು, 16 ಪ್ರಕರಣಗಳಲ್ಲಿ ಉದ್ಘೋಷಣೆ ಮತ್ತು 36 ಕೇಸ್‌ನಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದವು. ಮತ್ತೋರ್ವ ಮಹಮ್ಮದ್ ವಿರುದ್ಧ 12 ಪೊಲೀಸ್ ಠಾಣೆಗಳಲ್ಲಿ 31 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 11 ಕೇಸಿನಲ್ಲಿ ಉದ್ಘೋಷಣೆ ಮತ್ತು 19 ಕೇಸಿನಲ್ಲಿ ವಾರಂಟ್ ಜಾರಿಯಾಗಿದ್ದವು. 2023ರಿಂದ ವಿಚಾರಣೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತಗೊಂಡು ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಆರ್. ದೀಪಕ್ ಆರೋಪಿಗಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದ ಈ ಇಬ್ಬರು,ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜಿನ ಜೀವನ ನಡೆಸಲು 2014ರಲ್ಲಿ ಸರಗಳ್ಳತ ಎಸಗಲು ಆರಂಭಿಸಿದ್ದರು. ಎಂಎಸ್‌ಸಿ ವ್ಯಾಸಂಗ ಮಾಡಿದ್ದ ಅಕ್ಕ-ತಂಗಿಯರನ್ನು ಮದುವೆಯಾಗಿದ್ದರು.
2014ರಿಂದ 2023ರವರೆಗೆ ಜಯನಗರ, ಜೆ.ಪಿ.ನಗರ ವಿಜಯನಗರ, ಬನಶಂಕರಿ, ಬಾಣಸವಾಡಿ ಸೇರಿದಂತೆ 33 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡಿದ್ದರು. 2023ರಲ್ಲಿ ಮಲ್ಲೇಶ್ವರ ಮತ್ತು ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಸರ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ಜಾಮೀನು ಪಡೆದು ಹೊರಬಂದ ಮೇಲೆ ಮತ್ತೆ ಹಳೇ ಚಾಳಿಯನ್ನು ಮುಂದುವರಿಸಿ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಉದ್ಘೋಷಿತ ಅಪರಾಧಿ ಮತ್ತು ಜಾಮೀನುರಹಿತ ವಾರಂಟ್ ಹೊರಡಿಸಿತ್ತು.
ಆರೋಪಿಗಳು ಎರಡು ವರ್ಷಗಳ ಕಾಲ ಹೋಟೆಲ್, ಲಾಡ್ಜ್ಗಳಲ್ಲಿ ತಂಗುತ್ತಿದ್ದರು. ಹೆಚ್ಚಾಗಿ ಮನೆಯಲ್ಲಿ ಇರುತ್ತಿರಲಿಲ್ಲ. ಮೇಲ್ನೋಟಕ್ಕಾಗಿ ಜಬೀವುದ್ದೀನ್ ಸಾಲ ಕೊಡಿಸುವುದು ಮತ್ತು ಚೆಕ್ ಡಿಸ್ಕೌಂಟ್ ಮಾಡಿಸುವ ಕೆಲಸ ಮಾಡಿಸುತ್ತಿದ್ದ. ಮತ್ತೋರ್ವ ಆರೋಪಿಯು ಗೋವಾದಿಂದ ಮೀನು ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ.
ಆರೋಪಿಗಳ ಪತ್ತೆಗಾಗಿ ಇನ್‌ಸ್ಪೆಕ್ಟರ್ ಆರ್. ದೀಪಕ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸತತ ಕಾರ್ಯಾಚರಣೆ ತಾಂತ್ರಿಕ ಮಾಹಿತಿ ಕಲೆ ಹಾಕಿದಾಗ ಪುಲಕೇಶಿನಗರದ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮೇರೆಗೆ ಹೋಟೆಲ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.