ನ್ಯೂಸ್

ಮ್ಯಾಟ್ರಿಮೋನಿ ಮೂಲಕ ವಂಚಿಸಿದ್ದವನ ಸೆರೆ: 30 ಕ್ಕೂ ಹೆಚ್ಚು ಮಹಿಳೆಯರಿಗೆ ಧೋಖಾ

ಬೆಂಗಳೂರು: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆದು ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ದೀಪಕ್ ಎಂಬಾತನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರದ ಒಂದನೇ ಹಂತದಲ್ಲಿ ನೆಲೆಸಿರುವ ಅವಿವಾಹಿತ ಮಹಿಳೆಯು ವರನ ಅನ್ವೇಷಣೆಗಾಗಿ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಕಳೆದ ೆಬ್ರುವರಿ ತಿಂಗಳಲ್ಲಿ ಖಾತೆ ತೆರೆದಿದ್ದರು. ಅದೇ ಆ್ಯಪ್‌ನಲ್ಲಿ ದೀಪಕ್ ಸಹ ಖಾತೆ ತೆರೆದಿದ್ದ. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ದೀಪಕ್‌ನ ಪ್ರೊೈಲ್ ನೋಡಿದ್ದ ಜೆ.ಪಿ.ನಗರದ ಮಹಿಳೆಯು ಆತನನ್ನು ಸಂಪರ್ಕಿಸಿದ್ದರು. ಆಗ ಆರೋಪಿ ದೀಪಕ್, ತಮಿಳುನಾಡಿನ ಮದುರೈ ನಿವಾಸಿಯಾದ ತಾನು ಎಸ್‌ಬಿಐ ಬ್ಯಾಂಕ್‌ನಲ್ಲಿ ಆಪರೇಷನ್ ಮ್ಯಾನೇಜರ್ ಆಗಿದ್ದೇನೆ ಎಂದು ಮಹಿಳೆಗೆ ನಂಬಿಸಿದ್ದ. ನಂತರ ಪರಸ್ಪರರು ವಾಟ್ಸಾಪ್ ಮೂಲಕ ವೈಯಕ್ತಿಕ ವಿವರ ಹಂಚಿಕೊಂಡಿದ್ದರು. ಆ ನಂತರ ದೀಪಕ್, ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ. ಬಳಿಕ ಪರಸ್ಪರರು ಹಲವು ದಿನಗಳವರೆಗೆ ಮೊಬೈಲ್ ಸಂಪರ್ಕದಲ್ಲಿದ್ದರು. ಈ ಮಧ್ಯೆ ದೀಪಕ್, ತನ್ನ ಪರ್ಸ್ ಕಳೆದು ಹೋಗಿದ್ದು ತುರ್ತಾಗಿ ಹಣ ಬೇಕಿದೆ ಎಂದು ಮಹಿಳೆಯಿಂದ ೩೦ ಸಾವಿರ ರೂ. ಪಡೆದುಕೊಂಡಿದ್ದ. ಮಹಿಳೆಯು ೆನ್ ಪೇ ಮೂಲಕ ಹಣ ಹಾಕಿದ ನಂತರ ದೀಪಕ್ ತನ್ನ ಮೊಬೈಲ್ ಸ್ವಿಚ್ ಆ್ ಮಾಡಿದ್ದ. ಹೀಗಾಗಿ, ಮಹಿಳೆಗೆ ಅನುಮಾನ ಬಂದು ಆತನ ವಿರುದ್ಧ ದೂರು ಕೊಟ್ಟರು. ದೀಪಕ್‌ನ ಮೊಬೈಲ್ ಸಂಖ್ಯೆ ಮತ್ತು ಕರೆಗಳ ಮಾಹಿತಿ ಆಧರಿಸಿ ಆತನನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ:
ಮೂಲತಃ ತುಮಕೂರು ಜಿಲ್ಲೆಯ ಹುಳಿಯಾರಿನ ದೀಪಕ್, ದ್ವಿತೀಯ ಪಿಯುಸಿ ಓದಿದ್ದಾನೆ. ನಿರುದ್ಯೋಗಿಯಾದ ಆತ ಹಣ ಸಂಪಾದನೆಗಾಗಿ ವಂಚನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ. ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ದೀರ್ಘ ಕಾಲದವರೆಗೆ ಮದುವೆಯಾಗದ ಮಹಿಳೆಯರಿಗೆ ಗಾಳ ಹಾಕಿ ಯಾಮಾರಿಸುತ್ತಿದ್ದ. ದೀಪಕ್, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇದೇ ರೀತಿ ೩೦ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ತನಿಖೆಯ ವೇಳೆ ಗೊತ್ತಾಗಿದೆ. ಆದರೆ, ಒರ್ವ ಮಹಿಳೆಯನ್ನು ಹೊರತುಪಡಿಸಿ ಬೇರೆ ಯಾರೂ ದೂರು ಕೊಟ್ಟಿರಲಿಲ್ಲ. ಸದ್ಯ ಆರೋಪಿಯನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.