ನ್ಯೂಸ್

'ನನ್ನನ್ನು ಹುದ್ದೆಯಿಂದ ಕೆಳಗಿಳಿಸಲು ಭಾರತ ಪಿತೂರಿ ನಡೆಸುತ್ತಿದೆ' ಎಂದು ಆರೋಪಿಸಿದ ನೇಪಾಳ ಪ್ರಧಾನಿ

ಕಠ್ಮಂಡು: ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡಿರುವ ದೇಶ ನೇಪಾಳ. ಚೀನಾದ ಚಾಡಿ ಮಾತು ಕೇಳಿ, ಸ್ನೇಹಿತ ಭಾರತವನ್ನೇ ಎದುರು ಹಾಕಿಕೊಳ್ಳುತ್ತಿದೆ.

ತನ್ಮಧ್ಯ ನೇಪಾಳದಲ್ಲೇ ಬಂಡಾಯ ಶುರುವಾಗಿದೆ. ಈಗಿನ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿರುದ್ಧ ಅವರದ್ದೇ ಪಕ್ಷದ ಮುಖಂಡರು ಅಸಮಾಧಿನತಗೊಂಡಿದ್ದಾರೆ. ಕೆ.ಪಿ.ಶರ್ಮಾ ಅವರಿಗೆ ಈಗ ಪದಚ್ಯುತಿಯ ಭಯ ಕಾಡುತ್ತಿದೆ.

ನೇಪಾಳ ಕಮ್ಯುನಿಷ್ಟ್​ ಪಕ್ಷದ ಅಧ್ಯಕ್ಷರಾಗಿರುವ, ಮಾಜಿ ಪ್ರಧಾನಿ, ಪ್ರಚಂಡ ಎಂದೇ ಖ್ಯಾತರಾಗಿರುವ ಪುಷ್ಪ ಕಮಲ್​ ದೊಹಲ್​ ಅವರು ಪ್ರಧಾನಮಂತ್ರಿ ಕೆ.ಪಿ. ಶರ್ಮಾ ವಿರುದ್ಧ ತಿರುಗಿಬಿದ್ದಿದ್ದಾರೆ. ಭಾರತದೊಟ್ಟಿಗೆ ಶರ್ಮಾ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ..ಅವರದ್ದೆಲ್ಲ ಏಕಪಕ್ಷೀಯ ನಿರ್ಧಾರ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಪಿ. ಶರ್ಮಾ ರಾಜೀನಾಮೆ ನೀಡಬೇಕು ಎಂಬ ಮಾತುಗಳೂ ಬಂಡಾಯ ವಲಯದಿಂದ ಕೇಳಿಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಪಿ.ಶರ್ಮಾ ಓಲಿ, ನಮ್ಮ ದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಲು, ನಮ್ಮದೇ ಪಕ್ಷದವರು ನನ್ನ ವಿರುದ್ಧ ತಿರುಗಿ ಬೀಳಲು, ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿರಲು ಭಾರತದ ಪಿತೂರಿಯೇ ಕಾರಣ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಹುದ್ದೆಯಿಂದ ನನ್ನನ್ನು ಕೆಳಗೆ ಇಳಿಸಲು ಆಟ ಶುರುವಾಗಿದೆ. ಕಠ್ಮಂಡುವಿನ ಹೋಟೆಲ್​ವೊಂದರಲ್ಲಿ ಮೀಟಿಂಗ್, ಮಾತುಕತೆ ಶುರುವಾಗಿದೆ. ಇದರಲ್ಲಿ ರಾಯಭಾರಿ ಕಚೇರಿಯೊಂದರ ಕೈವಾಡವೂ ಇದೆ ಎಂದು ಭಾರತವನ್ನು ದೂರಿದ್ದಾರೆ.

ನೇಪಾಳದಲ್ಲಿ ನನ್ನ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಭಾರತ ಪ್ರಯತ್ನಿಸುತ್ತಿದೆ. ನೇಪಾಳದಲ್ಲಿರುವ ಭಾರತದ ರಾಯಭಾರಿ ಕಚೇರಿ ಈ ಪಿತೂರಿಯ ಮುಖ್ಯಕೇಂದ್ರವಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕರೊನಾ ಸೋಂಕಿನ 3 ಹೊಸ ಲಕ್ಷಣಗಳು ಪತ್ತೆ; ಎಚ್ಚರ… ನಿಮ್ಮಲ್ಲಿ ಈ ಸಮಸ್ಯೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ

ಯಾವಾಗ ನೇಪಾಳ ಭಾರತದ ಕೆಲವು ಭೂಭಾಗಳನ್ನು ಒಳಪಡಿಸಿದ ಪರಿಷ್ಕೃತ ನಕಾಶೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಿತೋ ಆಗಿನಿಂದಲೇ ನನ್ನ ವಿರುದ್ಧ ಸಂಚು ಕೂಡ ಶುರುವಾಗಿದೆ. ನೇಪಾಳದ ರಾಷ್ಟ್ರೀಯತೆಯೇನೂ ದುರ್ಬಲವಲ್ಲ. ಒಂದು ನಕಾಶೆಯ ಕಾರಣಕ್ಕೆ ನೇಪಾಳದ ಪ್ರಧಾನಿಯನ್ನು ಹುದ್ದೆಯಿಂದ ಕೆಳಗೆ ಇಳಿಸಬಹುದು ಎಂದುಕೊಂಡಿದ್ದರೆ ಅದು ಭ್ರಮೆಯಷ್ಟೇ. ನನ್ನನ್ನು ಯಾವ ಕಾರಣಕ್ಕೂ ಪದಚ್ಯುತಿ ಮಾಡಲು ಸಾಧ್ಯವೇ ಇಲ್ಲ ಎಂದು ಓಲಿ ಹೇಳಿದ್ದಾರೆ.

ಒಂದೆಡೆ ಕೆ.ಪಿ.ಓಲಿ ಅವರು ರಾಜೀನಾಮೆಗೆ ಹಿಂದೇಟು ಹಾಕುತ್ತಿದ್ದರೆ ಮತ್ತೊಂದೆಡೆ ಪುಷ್ಪ ಕಮಲ್​ ದೊಹಲ್​ ಅವರು ಕಮ್ಯುನಿಷ್ಟ್​ ಪಕ್ಷವನ್ನೇ ಒಡೆಯುವ ಬೆದರಿಕೆ ಹಾಕಿದ್ದಾರೆ. (ಏಜೆನ್ಸೀಸ್​)