ಜಿನೇವಾ: ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ವೈರಸ್ನ ಸೋಂಕು ಯಾವಾಗ ನಿಯಂತ್ರಣಕ್ಕೆ ಬರಬಹುದು ಎಂದು ಅಂದಾಜಿಸುವುದು ಸಾಧ್ಯವೇ ಇಲ್ಲ. ಈ ಹೊಸ ಕರೊನಾ ವೈರಸ್ ಬಹುಶಃ ಇಲ್ಲೇ ಇರುವುದಕ್ಕೇ ಬಂದಂತಿದೆ. ಇದೊಂದು ವೇಳೆ ದೂರ ಹೋಗದೇ ಇರಬಹುದು ಎಂದು ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (ಡಬ್ಲ್ಯುಎಚ್ಒ)ನ ತುರ್ತುಪರಿಸ್ಥಿತಿಗಳ ಮುಖ್ಯಸ್ಥ ಡಾ. ಮೈಕೆಲ್ ರಿಯಾನ್ ಹೇಳಿದ್ದಾರೆ.
ಈ ವೈರಸ್ ಬಹುಶಃ ನಮ್ಮ ಸಮುದಾಯ ನಡುವೆ ಎಚ್ಐವಿ ಮುಂತಾದ ಮತ್ತೊಂದು ಸೋಂಕು ಹರಡುವ ವೈರಸ್ ಗಳಂತೆಯೇ ಒಂದು ವೈರಸ್ ಆಗಿ ಉಳಿಯಲಿದೆ. ಸರಿಯಾದ ಔಷಧ ಇಲ್ಲದೇ ಹೋದರೂ ಈ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ಇದುವರೆಗೆ ಬಹಳ ಕಡಿಮೆ ಇದೆ. ಈ ವೈರಸ್ನ ಪರಿಣಾಮವನ್ನು ಎದುರಿಸಿ ಸಶಕ್ತವಾಗಿ ಜೀವನ ಸಾಗಿಸುವುದಕ್ಕೆ ಮನುಷ್ಯರಲ್ಲಿ ರೋಗ ಪ್ರತಿರೋಧ ಶಕ್ತಿ ಅಭಿವೃದ್ಧಿಯಾಗುವುದಕ್ಕೆ ಕೆಲವು ವರ್ಷಗಳೇ ಬೇಕಾದೀತು. ಈ ಬಗ್ಗೆ ಗಮನಹರಿಸುವುದು ಸದ್ಯದ ತುರ್ತು ಅಗತ್ಯ ಎಂದು ನನಗೆ ಅನ್ನಿಸುತ್ತಿದೆ. ಇದಕ್ಕೆ ಪರಿಣಾಮಕಾರಿಯಾದ ಲಸಿಕೆ ಅಭಿವೃದ್ಧಿ ಪಡಿಸಿ ಅದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕಾದ ಅವಶ್ಯಕತೆ ಇದೆ ಎಂದು ರಿಯಾನ್ ಹೇಳಿದ್ದಾರೆ.
ಇದೇ ವೇಳೆ ಡಬ್ಲ್ಯುಎಚ್ಒದ ಕೋವಿಡ್ 19 ಸಂಬಂಧಿಸಿದ ಟೆಕ್ನಿಕಲ್ ಲೀಡ್ ಮರಿಯಾ ವ್ಯಾನ್ ಕೆರ್ಖೋವ್ ಹೇಳುವ ಪ್ರಕಾರ, ಇದನ್ನು ನಿಯಂತ್ರಿಸುವುದು ನಾವು ಅನುಸರಿಸುವ ಜೀವನಶೈಲಿಯಲ್ಲೇ ಇದೆ. ಇದನ್ನು ನಾವು ಅನೇಕ ರಾಷ್ಟ್ರಗಳ ಜನರ ಉದಾಹರಣೆಯ ಮೂಲಕ ಗಮನಿಸಬಹುದು. ಆದರೆ, ಔಷಧ ಇಲ್ಲದೇ ಇದನ್ನು ಗುಣಪಡಿಸಲಾಗದು ಎಂದು ಹೇಳಿದ್ದಾರೆ. (ಏಜೆನ್ಸೀಸ್)