Arvind Kejriwal: ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸುವಂತೆ ದೆಹಲಿ ಮಾಜಿ ಅರವಿಂದ್ ಕೇಜ್ರಿವಾಲ್ ಗುರುವಾರ (ಆಗಸ್ಟ್ 28) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರನ್ನು ಒಬ್ಬ ದುರ್ಬಲ ಹೃದಯದ ವ್ಯಕ್ತಿ ಮತ್ತು ಹೇಡಿ" ಎಂದು ಕರೆದರು. ಟ್ರಂಪ್ ಮೊದಲು ಸುಂಕಗಳನ್ನು ಹೇರುತ್ತಾರೆ ಅದಕ್ಕೆ ಇತರ ದೇಶಗಳಿಂದ ತೀವ್ರ ವಿರೋಧ ವ್ಯಕ್ತವಾದಾಗ ತಮ್ಮ ನಡೆಯಿಂದ ಹಿಂದೆ ಸರಿಯುವ ಇತಿಹಾಸ ಹೊಂದಿದ್ದಾರೆ ಎಂದರು.
ಅಮೆರಿಕ ಶೇ 50% ರಷ್ಟು ಸುಂಕ ವಿಧಿಸಿದರೆ, ಭಾರತ ಸರ್ಕಾರ ಇದಕ್ಕೆ ಪ್ರತಿಕ್ರಿಯೆಯಾಗಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು 100% ಸುಂಕ ಹೇರಬೇಕು, ಇಡೀ ದೇಶ ಈ ಕ್ರಮವನ್ನು ಬೆಂಬಲಿಸುತ್ತದೆ. ಇತರ ದೇಶಗಳು ಸುಂಕ ಹೆಚ್ಚಿಸಿದ್ದನ್ನು ಭಾರತವೂ ಸಹ ಅನುಸರಿಸಬೇಕು ಎಂದರು.
ಅಮೆರಿಕದ ಹತ್ತಿಯ ಮೇಲಿನ 11% ಆಮದು ಸುಂಕವನ್ನು ಮನ್ನಾ ಮಾಡಿರುವುದನ್ನು ಖಂಡಿಸಿರುವ ಕೇಜ್ರಿವಾಲ್, ದೇಶೀಯವಾಗಿ ಉತ್ಪಾದಿಸುವ ಹತ್ತಿಗಿಂತ ಹೆಚ್ಚು ದುಬಾರಿಯಾಗಿದ್ದು, ಅದರ ಸುಂಕವನ್ನು ತೆಗೆದುಹಾಕುವ ಮೂಲಕ ಮೋದಿ ಸರ್ಕಾರ ಅಮೆರಿಕದ ಹತ್ತಿಯನ್ನು ಅಗ್ಗವಾಗಿಸಿದೆ, ಅಕ್ಟೋಬರ್‌ನಲ್ಲಿ ಭಾರತೀಯ ಹತ್ತಿ ಮಾರುಕಟ್ಟೆಗೆ ಬಂದಾಗ ಖರೀದಿದಾರರು ನಮ್ಮ ದೇಶದ ಹತ್ತಿ ಕೊಳ್ಳುಲು ನಿರಾಸಕ್ತಿ ತೋರಿಸುವ ಸಾಧ್ಯತೆ ಇದೆ, ಇದರಿಂದಾಗಿ ತೆಲಂಗಾಣ, ಪಂಜಾಬ್, ವಿದರ್ಭ ಮತ್ತು ಗುಜರಾತ್‌ನಂತಹ ಪ್ರದೇಶಗಳ ರೈತರಿಗೆ ಹಾನಿಯಾಗುತ್ತದೆ ಎಂದರು.(ಏಜೆನ್ಸೀಸ್)