ಬೆಂಗಳೂರು: ಪದವಿ ಕಾಲೇಜುಗಳಲ್ಲಿ 2019-20ನೇ ಶೈಕ್ಷಣಿಕ ಸಾಲಿನ ತರಗತಿಗಳನ್ನು ಆರಂಭಿಸುವ ಕುರಿತಂತೆ ಮಹತ್ವದ ಸಭೆ ಶುಕ್ರವಾರ ನಡೆಯಲಿದೆ. ಈಗಾಗಲೇ ಇಲಾಖೆ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿರುವ ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಶುಕ್ರವಾರ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಕರೊನಾ ಸಾಂಕ್ರಾಮಿಕ ಇನ್ನೂ ವ್ಯಾಪಕವಾಗಿರುವ ಸಂದರ್ಭದಲ್ಲಿ ಪದವಿ ತರಗತಿ ಆರಂಭಿಸಿದರೆ ಯಾವ ರೀತಿ ನಡೆಸಬೇಕು, ಪಠ್ಯ ಪ್ರಮಾಣ ಎಷ್ಟಿರಬೇಕು? ತರಗತಿಯಲ್ಲಿ ಮುಂಜಾಗ್ರತೆ ಹೇಗೆ? ಯಾವುದಕ್ಕೆ ಆದ್ಯತೆ ಕೊಡಬೇಕಾಗುತ್ತದೆ? ಯಾರ ಜವಾಬ್ದಾರಿ ಎಷ್ಟು? ಯಾವಾಗಿಂದ ತರಗತಿ ಆರಂಭಿಸಿದರೆ ಸೂಕ್ತ? ಪಾಳಿಯ ಮೇಲೆ ತರಗತಿ ನಡೆಸಬಹುದೇ? ಎಂಬಿತ್ಯಾದಿಯಾಗಿ ಪ್ರತ್ಯಕ್ಷಿಕೆ ರೂಪದಲ್ಲಿ ಚರ್ಚೆ ನಡೆಯುವುದು.
ಸಾಧಕ ಬಾಧಕಗಳ ಬಗ್ಗೆ ಡಿಸಿಎಂ ಹಾಗೂ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ತಿಳಿಸಿಕೊಡಲಿದ್ದಾರೆ. ಮುಖ್ಯವಾಗಿ ಅಂತಿಮ ವರ್ಷದ ತರಗತಿಯನ್ನು ನಿಗದಿತ ಕಾಲಾವಧಿಯಲ್ಲಿ ಮುಗಿಸಿ, ಪರೀಕ್ಷೆ ಮಾಡದೇ ಇದ್ದರೆ ಆಗಬಹುದಾದ ಅಡ್ಡ ಪರಿಣಾಮದ ಬಗ್ಗೆಯೂ ವಿವರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಾಳಜಿ ಕೇಂದ್ರಗಳಲ್ಲಿ ಮೊಟ್ಟೆ, ಬಾಳೆಹಣ್ಣು, ಚಪಾತಿ ಊಟ!
ನವೆಂಬರ್‌ನಲ್ಲಿ ತರಗತಿ ಆರಂಭಿಸುವ ಕುರಿತು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಂದೇಶ ಕಳಿಸಿತ್ತು. ಆ ಆಧಾರದ ಮೇಲೆ ಪ್ರಕ್ರಿಯೆ ಶುರುವಾಗಿದೆ. ಒಂದು ವೇಳೆ ಮುಖ್ಯಮಂತ್ರಿಯವರು ಒಪ್ಪಿದರೆ ನವೆಂಬರ್ ಮೊದಲ ವಾರದಲ್ಲೇ ತರಗತಿ ಆರಂಭವಾಗುವ ಸಾಧ್ಯತೆಯೂ ಇದೆ.