ನ್ಯೂಸ್

ಸಮಗ್ರ ನೋಟ 2024; ನ್ಯಾಯದಾನ ಪಥದಲ್ಲಿನ ಪ್ರಮುಖ ಬೆಳವಣಿಗೆಗಳು

ಬಾಬುಪ್ರಸಾದ್​ ಮೋಡಿಸ್​

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗವೂ ಒಂದು ಪ್ರಮುಖ ಅಂಗ. ಶಾಸಕಾಂಗ ಮತ್ತು ಕಾರ್ಯಾಂಗ ಎಡವಿದಾಗ ಎಚ್ಚರಿಸಿ, ಸರಿದಾರಿಗೆ ತರುವ ಕೆಲಸವನ್ನು ನ್ಯಾಯಾಂಗ ಮಾಡುತ್ತಲೇ ಬಂದಿದೆ. ಈ ವರ್ಷವೂ ಹತ್ತುಹಲವು ಮಹತ್ವದ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿದ ನ್ಯಾಯದಾನ ಗಮನ ಸೆಳೆಯಿತು. ಆಯ್ದ ಕೆಲವು ಪ್ರಮುಖ ತೀರ್ಪಗಳ ಮಾಹಿತಿ ಇಲ್ಲಿದೆ.

ರಾಘವ ಶರ್ಮ ನಿಡ್ಲೆ, ಪವಿತ್ರಾ ಕುಂದಾಪುರ ಗುಜರಾತ್ ಗಲಭೆ ವೇಳೆ (2002) ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ವಿನಾಯಿತಿ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಜನವರಿ 8ರಂದು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಹೀಗಾಗಿ, ಈ ಅಪರಾಧಿಗಳು ಮತ್ತೆ ಜೈಲುಪಾಲಾಗಿದ್ದಾರೆ. ಅತ್ಯಾಚಾರ ಅಪರಾಧಿಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿದ ಸರ್ಕಾರದ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಕೋಮುಗಲಭೆಗಳ ಭೀಕರತೆಯಿಂದ ತಪ್ಪಿಸಿಕೊಳ್ಳುತ್ತಿದ್ದ ವೇಳೆ ಬಿಲ್ಕಿಸ್ ಬಾನೋಗೆ 21 ವರ್ಷ ಮತ್ತು ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು. ಗಲಭೆಯಲ್ಲಿ ಸಾವನ್ನಪ್ಪಿದ ಏಳು ಕುಟುಂಬ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು.

ಸಂಸದರು, ಶಾಸಕರ ವಿರುದ್ಧ ಕಾನೂನು ಕ್ರಮ

ಸಂಸದರು, ಶಾಸಕರು ಮತ ಚಲಾಯಿಸಲು ಅಥವಾ ಸದನದಲ್ಲಿ ಭಾಷಣ ಮಾಡಲು ಲಂಚ ತೆಗೆದುಕೊಳ್ಳುವ ಘಟನೆಗಳಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದ ಸುಪ್ರೀಂಕೋರ್ಟ್, ಲಂಚ ಪಡೆದ ಆರೋಪದಲ್ಲಿ ಶಾಸಕರಿಗೆ ವಿನಾಯಿತಿ ನೀಡುವ ಪಿವಿ ನರಸಿಂಹ ರಾವ್ ಪ್ರಕರಣದ ತೀರ್ಪನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿತು. ‘ಶಾಸಕಾಂಗ ಸದಸ್ಯರ ಭ್ರಷ್ಟಾಚಾರ ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಪಡಿಸುತ್ತದೆ’ ಎಂದ ಆಗಿನ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠ, 1998ರ ಜೆಎಂಎಂ ಲಂಚ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನ ಐದು ನ್ಯಾಯಮೂರ್ತಿಗಳು ತೀರ್ಪನ್ನು ತಳ್ಳಿಹಾಕಿತು.

ಚುನಾವಣಾ ಬಾಂಡ್ ರದ್ದು

ರಾಜಕೀಯ ಪಕ್ಷಗಳಿಗೆ ಅನಾ ಮಧೇಯ ಹೆಸರಿನ ದೇಣಿಗೆ ಅನುಮತಿಸುವ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆ ಯನ್ನು ಸುಪ್ರೀಂಕೋರ್ಟ್ ಸರ್ವಾನುಮತದ ತೀರ್ಪಿನಲ್ಲಿ ಅಸಂವಿಧಾನಿಕ ಎಂದು ಫೆಬ್ರವರಿ 15ರಂದು ಘೊಷಿಸಿತು. ರಾಜಕೀಯ ಪಕ್ಷಗಳು ಪ್ರತಿಯೊಂದು ಚುನಾವಣಾ ಬಾಂಡ್ ವಿವರವನ್ನೂ ಬಹಿರಂಗಪಡಿಸಬೇಕು ಎಂದು ನಿರ್ದೇಶನ ನೀಡಿತು.

ಎಸ್ಸಿ/ಎಸ್ಟಿ ಕೋಟಾ ಉಪ-ವರ್ಗೀಕರಣ

ಪರಿಶಿಷ್ಟ ಜಾತಿ/ಪಂಗಡ ವರ್ಗಗಳಲ್ಲಿ ಉಪ-ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ತನ್ನ ಅನುಮೋದನೆ ನೀಡುವ ಐತಿಹಾಸಿಕ ತೀರ್ಪನ್ನು ಆಗಸ್ಟ್​ನಲ್ಲಿ ಪ್ರಕಟಿಸಿತು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಯೋಜನಗಳ ಸೂಕ್ಷ್ಮ ಹಂಚಿಕೆಗೆ ಅವಕಾಶ ನೀಡಿದ ಕೋರ್ಟ್, ಈ ನಿರ್ಧಾರದಿಂದ ಅಂಚಿನಲ್ಲಿರುವ ಸಮುದಾಯಗಳೊಳಗಿನ ಅಸಮಾನತೆ ಪರಿಹರಿಸಬೇಕು. ಅತ್ಯಂತ ಹಿಂದುಳಿದ ಗುಂಪುಗಳು ಪ್ರಯೋಜನಗಳ ನ್ಯಾಯಯುತ ಪಾಲನ್ನು ಪಡೆಯಬೇಕು ಎಂದು ತಿಳಿಸಿತು. ಈ ಮಹತ್ವದ ತೀರ್ಪನ್ನು ಆಗಿನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ 6:1 ಬಹುಮತದಿಂದ ಅಂಗೀಕರಿಸಿತು. ಎಸ್​ಸಿ/ಎಸ್​ಟಿ ಸಮುದಾಯಗಳಲ್ಲಿ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ಇವಿ ಚಿನ್ನಯ್ಯ ಪ್ರಕರಣದಲ್ಲಿ 5 ನ್ಯಾಯಮೂರ್ತಿಗಳ ಪೀಠ 2004ರಲ್ಲಿ ನೀಡಿದ್ದ ತೀರ್ಪನ್ನು ಈ ಪೀಠವು ರದ್ದುಗೊಳಿಸಿತು.

ಮಕ್ಕಳ ರಕ್ಷಣೆ

ಮಕ್ಕಳ ಅಶ್ಲೀಲ ಚಿತ್ರ/ವಿಡಿಯೋಗಳನ್ನು ಸಂಗ್ರಹಿಸುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅಪರಾಧ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ 23ರಂದು ಪ್ರಕಟಿಸಿತು. ಮಕ್ಕಳ ಅಶ್ಲೀಲ ಚಿತ್ರಗಳನ್ನು ಕೆಟ್ಟ ಉದ್ದೇಶವಿಲ್ಲದೆ ಡೌನ್​ಲೋಡ್ ಮಾಡುವುದು ಅಥವಾ ವೀಕ್ಷಿಸುವುದು, ಹಂಚುವುದು ಉದ್ದೇಶವಿಲ್ಲದೆ ಅಪರಾಧವಾಗುವುದಿಲ್ಲ ಎಂದು ಈ ಹಿಂದೆ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ಇದನ್ನು ತಳ್ಳಿಹಾಕಿತು.

ಕೈದಿಗಳಿಗೂ ಬದುಕುವ ಹಕ್ಕಿದೆ

ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ನಿಷೇಧಿಸಿದ ಸುಪ್ರೀಂಕೋರ್ಟ್, ಕಾರ್ವಿುಕರ ವಿಭಜನೆ, ಪ್ರತ್ಯೇಕ ಬ್ಯಾರಕ್ ಮಾಡುವುದು, ಬುಡಕಟ್ಟುಗಳ ಕೈದಿಗಳನ್ನು ತಾರತಮ್ಯದಿಂದ ನೋಡುವ ಧೋರಣೆಗಳನ್ನು ನಿಲ್ಲಿಸಬೇಕು ಎಂದು ತೀರ್ಪು ನೀಡಿತು. ಇದಕ್ಕೆ ಸಂಬಂಧಿಸಿ ಜಾರಿಯಲ್ಲಿದ್ದ ಜೈಲು ಮಾರ್ಗದರ್ಶಿಯನ್ನೂ ರದ್ದುಗೊಳಿಸಿತು.

ಮದರಸಾ ಕಾಯ್ದೆಯ ಸಿಂಧುತ್ವ

ಉತ್ತರ ಪ್ರದೇಶ ಸರ್ಕಾರ 2004ರಲ್ಲಿ ರೂಪಿಸಿದ್ದ ಮದರಸಾ ಕಾಯ್ದೆಯ ಸಿಂಧುತ್ವವನ್ನು ರದ್ದುಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ, ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿಯಿತು. ಮದರಸಾಗಳಲ್ಲಿ ಸೂಚಿಸಲಾದ ಶಿಕ್ಷಣದ ಮಟ್ಟವನ್ನು ಪ್ರಮಾಣೀಕರಿಸುವುದು ಕಾಯ್ದೆಯ ಉದ್ದೇಶವಾಗಿದೆಯೇ ಹೊರತು ಮದರಸಾಗಳ ದೈನಂದಿನ ಕೆಲಸದಲ್ಲಿ ಮಧ್ಯಪ್ರವೇಶ ಮಾಡುವುದಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮದರಸಾ ಕಾನೂನು ಅಸಾಂವಿಧಾನಿಕ ಎಂದು ಮಾರ್ಚ್ 22ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಜುಂ ಖಾದ್ರಿ ಸೇರಿದಂತೆ 8 ಮಂದಿ ಸುಪ್ರಿಂಗೆ ಮೇಲ್ಮನವಿ ಸಲ್ಲಿಸಿ, ಹೈಕೋರ್ಟ್ ತೀರ್ಪಿ ನಿಂದಾಗಿ ಮದರಸಾದಲ್ಲಿರುವ 17 ಲಕ್ಷ ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ ಎಂದಿದ್ದರು. ‘ಉತ್ತರ ಪ್ರದೇಶ ಬೋರ್ಡ್ ಆಫ್ ಮದರ್ಸಾ ಎಜುಕೇಶನ್ ಆಕ್ಟ್, 2004ನ್ನು’ ಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ನ.5ರಂದು ಘೊಷಿಸಿತು.

ಬುಲ್ಡೋಜರ್ ಜಸ್ಟಿಸ್​ಗೆ ಲಗಾಮು

‘ಕಾರ್ಯಾಂಗ ನ್ಯಾಯಾಂಗದ ಸ್ಥಾನದಲ್ಲಿ ನಿಲ್ಲಲು ಸಾಧ್ಯವಿಲ್ಲ. ಆರೋಪಿಯ ಅಪರಾಧವನ್ನು ಪೂರ್ವಗ್ರಹದಿಂದ ನೋಡಿ, ಮನೆಗಳನ್ನು ಕೆಡವಿದರೆ ಅದು ಸಂಪೂರ್ಣ ಅಸಾಂವಿಧಾನಿಕ’ ಎಂದು ‘ಬುಲ್ಡೋಜರ್ ನ್ಯಾಯ’ ಎಂದೇ ವ್ಯಾಖ್ಯಾನಿಸಲಾದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತು. ಸೂಕ್ತ ಕಾನೂನು ನಿಯಮಗಳನ್ನು ಪಾಲಿಸದೆ ಬುಲ್ಡೋಜರ್ ಮೂಲಕ ಕಟ್ಟಡಗಳನ್ನು ಏಕಾಏಕಿ ಧ್ವಂಸಗೊಳಿಸುವ ವಿಚಾರಕ್ಕೆ ಸಂಬಂಧಿಸಿ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾ. ಬಿಆರ್ ಗವಾಯಿ ಮತ್ತು ನ್ಯಾ. ಕೆವಿ ವಿಶ್ವನಾಥನ್ ದ್ವಿಸದಸ್ಯ ಪೀಠ, ಕಟ್ಟಡ ಧ್ವಂಸ ಕುರಿತು ಹಲವು ನಿಯಮಾವಳಿಗಳನ್ನು ರೂಪಿಸಿ, ಎಲ್ಲ ರಾಜ್ಯಗಳನ್ನು ಪಾಲಿಸುವಂತೆ ಸೂಚನೆ ನೀಡಿತು.

ಖಾಸಗಿ ಆಸ್ತಿ ಕುರಿತು

ಖಾಸಗಿ ಒಡೆತನದ ಎಲ್ಲ ಆಸ್ತಿಗಳು ಸಮುದಾಯ ಸಂಪನ್ಮೂಲಗಳು ಎಂದು ಪರಿಗಣಿಸಿ, ಸರ್ಕಾರ ಅದನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಮಹತ್ವ ಪಡೆದುಕೊಂಡಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು 8-1 ಬಹುಮತದೊಂದಿಗೆ ಈ ವಿವಾದದ ಬಗ್ಗೆ ತೀರ್ಪು ನೀಡಿತು. ಖಾಸಗಿ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರಬಹುದು. ಆದರೆ, ವ್ಯಕ್ತಿಯ ಒಡೆತನದ ಪ್ರತಿ ಸಂಪನ್ಮೂಲ ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಬೇಕಿಲ್ಲ. ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಪ್ರತಿಯೊಂದು ಖಾಸಗಿ ಆಸ್ತಿಯನ್ನು ಸಮುದಾಯದ ಆಸ್ತಿಯ ಭಾಗವಾಗಿ ನೋಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.

ಕೆಆರ್​ಎಸ್ ಸುತ್ತ ಗಣಿಗಾರಿಕೆ ನಿಷೇಧ

ಕೃಷ್ಣರಾಜ ಸಾಗರ (ಕೆಆರ್​ಎಸ್) ಅಣೆಕಟ್ಟೆ ಸುತ್ತ 30 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಜನವರಿಯಲ್ಲಿ ಹೈಕೋರ್ಟ್ ಆದೇಶ ಹೊರಡಿಸಿತು. ಕಾವೇರಿ ನೀರಿಗಾಗಿ ಮೂರು ರಾಜ್ಯಗಳು ಹೋರಾಡುತ್ತಿವೆ. ಅಣೆಕಟ್ಟೆಗೆ ತೊಂದರೆಯಾದರೆ ಇಡೀ ರಾಜ್ಯಕ್ಕೆ ಗಂಭೀರ ಆಪತ್ತು ಬರಲಿದೆ. ಅಣೆಕಟ್ಟೆಗೆ ಧಕ್ಕೆಯಾಗುವಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಲ್ಲ ಎಂದಿತು.

ಕನ್ನಡದಲ್ಲೇ ತೀರ್ಪು ಪ್ರಕಟ

ಹೈಕೋರ್ಟ್ ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ಅವರು ಕನ್ನಡ ಭಾಷೆಯಲ್ಲೇ ತೀರ್ಪು ಪ್ರಕಟಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಹಿಂದೆ ನ್ಯಾಯ ಮೂರ್ತಿ ಅರಳಿ ನಾಗರಾಜ್ ಅವರು ಮೊದಲ ಬಾರಿಗೆ ಇಂಗ್ಲಿಷ್​ನಿಂದ ತೀರ್ಪನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿದ್ದರು. ಆದರೆ, ಕೃಷ್ಣ ದೀಕ್ಷಿತ್ ಕನ್ನಡದಲ್ಲೇ ಉಕ್ತಲೇಖನ ಬರೆಸಿದರು.

ಮಹಿಳೆಗೆ ನ್ಯಾಯ...

ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಮಹಿಳೆಯ ರಕ್ಷಣೆಗೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತು. ಜತೆಗೆ ಮಹಿಳೆಗೆ 2 ಎಕರೆ ಜಮೀನು ಮತ್ತು ಸರ್ಕಾರದಿಂದ ಚಿಕಿತ್ಸೆ ಮತ್ತು ಪರಿಹಾರ ಒದಗಿಸುವಂತೆ ತೀರ್ಪು ಪ್ರಕಟಿಸಿತು.

ಡಿ ಗ್ಯಾಂಗ್​ಗೆ ಬೇಲ್

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತು. ಇದಕ್ಕೂ ಮುನ್ನ ಬೆನ್ನುಮೂಳೆ ನೋವಿನಿಂದ ಬಳಲುತ್ತಿದ್ದ ದರ್ಶನ್​ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಲು ವೈದ್ಯಕೀಯ ಜಾಮೀನನ್ನು ನ್ಯಾಯಪೀಠ ಮಂಜೂರು ಮಾಡಿತ್ತು.

ಮೃತ ಹೆಣ್ಣುಮಕ್ಕಳಿಗೂ ಪಾಲು

ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣುಮಕ್ಕಳ ಪಾಲು ನೀಡಲು ನಿರಾಕರಿಸುವುದು ಸಂವಿಧಾನದ ಸಮಾನತೆ ತತ್ವಕ್ಕೆ ವಿರುದ್ಧ. ಆದ್ದರಿಂದ ಮೃತ ಹೆಣ್ಣಮಕ್ಕಳಿಗೂ ಸಮಾನ ಪಾಲು ನೀಡಬೇಕು ಎಂದು ಜನವರಿಯಲ್ಲಿ ಹೈಕೋಟ್ ಮಹತ್ವದ ತೀರ್ಪು ನೀಡಿತು. ಹಿಂದು ಉತ್ತರಾಧಿಕಾರ ಕಾಯಿದೆ 2005 ತಿದ್ದುಪಡಿಗೂ ಮುನ್ನ ಮೃತಪಟ್ಟ ಮಗನಿಗೆ ಆಸ್ತಿಯ ಹಕ್ಕುಗಳು ಉಳಿದುಕೊಂಡಿವೆ ಎನ್ನುವುದಾದರೆ ಮಗಳಿಗೂ ಅದು ಅನ್ವಯವಾಗುತ್ತದೆ. ಮೊದಲೇ ನಿಧನರಾದ ಮಗಳು-ಮಗನ ನಡುವೆ ಯಾವುದೇ ತಾರತಮ್ಯ ಮಾಡಲು ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ನರ್ಸಿಂಗ್ ಸೇವೆ

ಭಾರತೀಯ ಸೇನೆಯಲ್ಲಿ ನರ್ಸಿಂಗ್ ಸೇವೆಗೆ ಮಹಿಳೆಯರಿಗೆ ಮಾತ್ರ ಇದ್ದಂತಹ ಅವಕಾಶ ರದ್ದು ಗೊಳಿಸಿದ್ದಲ್ಲದೆ, ಈ ರೀತಿಯ ಮೀಸ ಲಾತಿ ಸಂವಿಧಾನದ ಪರಿಚ್ಛೇದ 14 ಮತ್ತು 16(2)ಕ್ಕೆ ವಿರುದ್ಧ ಎಂದು ಹೈಕೋರ್ಟ್ ಆದೇಶ ಹೊರಡಿಸಿತು.

ಬೋರ್ಡ್ ಪರೀಕ್ಷೆ ರದ್ದು

ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿತು. ಆದರೆ, ವಿಭಾಗೀಯ ಪೀಠ ಪರೀಕ್ಷೆಗಳನ್ನು ನಡೆಸಲು ಅನುಮತಿ ಕೊಟ್ಟಿತ್ತು. ಬಳಿಕ ಸುಪ್ರೀಂಕೋರ್ಟ್ ಅನುಮತಿ ರದ್ದುಪಡಿಸಿತು.

ಹೈಕೋರ್ಟ್​ನ ಇತರ ಪ್ರಮುಖ ತೀರ್ಪಗಳು

ನಿವೃತ್ತಿ ನಂತರ ಸೇವಾ ಅವಧಿ ವಿಸ್ತರಣೆಗಾಗಿ ಜನ್ಮದಿನ ಬದಲಾವಣೆ ಕೋರಲು ಅವಕಾಶವಿಲ್ಲ.

ಭಾರತ್ ಮಾತಾ ಕಿ ಜೈ ಘೊಷಣೆ ಸಾಮರಸ್ಯ ಉತ್ತೇಜಿಸುವ ಸಂಕೇತ.

ಅಪಘಾತ ಸಂಭವಿಸಿದಾಗ ವಾಹನಕ್ಕೆ ಪರವಾನಗಿ, ಎಫ್​ಸಿ ಇಲ್ಲದಿದ್ದರೂ ಸಂತ್ರಸ್ತರಿಗೆ ವಿಮಾ ಕಂಪನಿ ಪರಿಹಾರ ಪಾವತಿಸಬೇಕು.

ವಾಲ್ಮೀಕಿ ನಿಗಮ ಹಗರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಯೂನಿಯನ್ ಬ್ಯಾಂಕ್ ಕೋರಿದ್ದ ಅರ್ಜಿ ವಜಾ.

ಮುಖ್ಯಮಂತ್ರಿಗೆ ತನಿಖೆ ಬಿಸಿ

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಅಲ್ಲದೆ, ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿತು. ಹೀಗಾಗಿ ವಿಚಾರಣೆ ಮುಂದುವರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತ ತನಿಖೆಗೆ ಆದೇಶಿಸಿತು.