ಮುಂಬೈ: ದೇಶಾದ್ಯಂತ ಜನರ ದೈನಂದಿನ ಜೀವನ ಮತ್ತು ಕುಟುಂಬದ ಬಜೆಟ್ ಮೇಲೆ ಪರಿಣಾಮ ಬೀರುವ ಹಲವು ಬದಲಾವಣೆಗಳು ಭಾನುವಾರದಿಂದ ಜಾರಿಗೆ ಬರಲಿವೆ.
ಟ್ರಾಯ್ ಗಡುವು ಅಂತ್ಯ: ಸ್ಪ್ಯಾಮ್ ಮತ್ತು ಫಿಶಿಂಗ್ ಮೆಸೇಜ್ಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಟ್ರೇಸೆಬಿಲಿಟಿ ನಿಯಮಗಳನ್ನು ಟ್ರಾಯ್ ಡಿ. 1 ಭಾನುವಾರದಿಂದ ಜಾರಿಗೊಳಿಸಲಿದೆ. ‘ಒಟಿಪಿಗಳೂ ಸೇರಿದಂತೆ ಎಲ್ಲ ವಾಣಿಜ್ಯ ಸಂದೇಶಗಳ ಮೂಲವನ್ನು ದೂರಸಂಪರ್ಕ ಕಂಪನಿಗಳು ಟ್ರ್ಯಾಕ್ ಮಾಡಲೇಬೇಕು. ವಂಚನೆಯಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ಇದರಿಂದ ಸಹಾಯವಾಗುತ್ತದೆ. ಸಂದೇಶಗಳ ಮೂಲವನ್ನು ಪತ್ತೆ ಹಚ್ಚುವ ಮೂಲಕ ದುರುದ್ದೇಶಪೂರಿತ ಸಂವಹನವನ್ನು ದೂರಸಂಪರ್ಕ ಸೇವೆ ಪೂರೈಕೆದಾರರು ತಡೆಯಬಹುದು. ಬಳಕೆದಾರರನ್ನು ಹಗರಣಗಳಿಂದ, ವಂಚನೆಯಿಂದ ರಕ್ಷಿಸಬಹುದು’ ಎಂಬುದು ಟ್ರಾಯ್ನ ಉದ್ದೇಶವಾಗಿದೆ.
ಈ ನಿಯಮಗಳನ್ನು ಪಾಲಿಸಲು ನ. 30ರ ಗಡುವನ್ನು ನೀಡಲಾಗಿತ್ತು. ಪಾಲಿಸದೇ ಇರುವ ಕಂಪನಿಗಳ ಮೆಸೇಜಿಂಗ್ ಸೇವೆಯಲ್ಲಿ ವ್ಯತ್ಯಯವಾಗಬಹುದು. ಒಟಿಪಿಗಳು ಸ್ಥಗಿತವಾಗಬಹುದು, ಇಲ್ಲವೆ ವಿಳಂಬವಾಗಬಹುದು. ಇದರಿಂದ ಬ್ಯಾಂಕಿಂಗ್, ಇ-ಕಾಮರ್ಸ್, ಸೋಷಿಯಲ್ ಮೀಡಿಯಾ ವೇದಿಕೆಗಳಿಗೆ ತೊಂದರೆ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಆದರೆ ಈ ನಿಯಮಾವಳಿಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿದ್ದ ಟ್ರಾಯ್, ಮೆಸೇಜಿಂಗ್ನಲ್ಲಿ ನಿರತವಾಗಿರುವ ಖಾಸಗಿ ವಾಣಿಜ್ಯ ಕಂಪನಿಗಳಿಗೆ ಪ್ರತಿದಿನವೂ ಎಚ್ಚರಿಸಲು ಅನುವಾಗುವಂತೆ ಸಾಕಷ್ಟು ಸಮಯವನ್ನೂ ದೂರಸಂಪರ್ಕ ಕಂಪನಿಗಳಿಗೆ ನೀಡಿತ್ತು. ಇದೀಗ ಆ ಗಡುವು ಶನಿವಾರಕ್ಕೆ ಅಂತ್ಯವಾಗಿದ್ದು, ಭಾನುವಾರದಿಂದ ಹೊಸ ನಿಯಮ ಜಾರಿಯಾಗಲಿವೆ. ಈ ಮಧ್ಯೆ ಸ್ಪಷ್ಟನೆ ನೀಡಿರುವ ಟ್ರಾಯ್, ಈ ನಿಯಮಗಳು ತಾತ್ಕಾಲಿಕವಾಗಿ ಒಟಿಪಿ ಸೇವೆಗಳ ಮೇಲೆ ಪರಿಣಾಮ ಬೀರಬಹುದಾದರೂ, ನಿಯಮಗಳು ಜಾರಿಗೆ ಬಂದ ಮೇಲೆ ಒಟಿಪಿ ಡೆಲಿವರಿಯಲ್ಲಿ ಯಾವುದೇ ವಿಳಂಬ ಆಗುವುದಿಲ್ಲ ಎಂದು ತಿಳಿಸಿದೆ.
ಒಟಿಪಿ ವಿಳಂಬ ಆಗುವುದಿಲ್ಲ: ಮೊಬೈಲ್ ಫೋನ್ಗಳಿಗೆ ಬರುವ ಒನ್ ಟೈಮ್ ಪಾಸ್ವರ್ಡ್ಗಳು (ಒಟಿಪಿ) ಡಿಸೆಂಬರ್ 1ರಿಂದ ವಿಳಂಬವಾಗಿ ಡೆಲಿವರ್ ಆಗುತ್ತವೆ ಎಂಬ ವರದಿಗಳು ಆಧಾರರಹಿತ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸ್ಪಷ್ಟಪಡಿಸಿದೆ. ‘ವಾಣಿಜ್ಯ ಉದ್ದೇಶದ ಬಲ್ಕ್ ಮೆಸೇಜ್ಗಳು ಹಾಗೂ ಒಟಿಪಿಗಳ ಜಾಡು ಪತ್ತೆಗೆ ಕ್ರಮ ಕೈಗೊಳ್ಳಬೇಕು, ಒಟಿಪಿಗಳ ಮೂಲ ಪತ್ತೆಯಿಂದ ವಂಚಕರ ಬಗ್ಗೆ ತಿಳಿದು ವಂಚನೆ ಯತ್ನ ತಡೆಯಬೇಕು ಎಂದು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶನ ನೀಡಿತ್ತು. ಈ ನಿರ್ದೇಶನಗಳನ್ನು ಪಾಲಿಸುವಂತೆ ಏರ್ಟೆಲ್, ವೊಡಾಫೋನ್-ಐಡಿಯಾ, ರಿಲಯನ್ಸ್ ಜಿಯೋ ಕಂಪನಿಗಳಿಗೆ 2024ರ ಡಿ. 1ರ ಅಂತಿಮ ಗಡುವು ನೀಡಲಾಗಿದೆ. ನ. 30ರ ಒಳಗೆ ಈ ಕಂಪನಿಗಳು ಟ್ರಾಯ್ ಸೂಚನೆ ಪಾಲಿಸದಿದ್ದಲ್ಲಿ ಸಂಬಂಧಿತ ಕಂಪನಿಗಳ ಗ್ರಾಹಕರ ಮೊಬೈಲ್ಫೋನ್ಗಳಿಗೆ ಒಟಿಪಿ ರವಾನೆ ಸ್ಥಗಿತಗೊಳ್ಳಲಿದೆ ಅಥವಾ ಒಟಿಪಿಗಳು ವಿಳಂಬವಾಗಿ ತಲುಪಲಿವೆ’ ಎಂದು ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ರಾಯ್, ‘ಮೆಸೇಜ್ಗಳ ಟ್ರೇಸೆಬಿಲಿಟಿಗಾಗಿ ಮತ್ತು ವಂಚನೆಗಳನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿದ್ದು, ಇದರಿಂದ ಒಟಿಪಿಗಳು ತಡವಾಗಿ ಗ್ರಾಹಕರನ್ನು ತಲುಪಲಿವೆ ಎಂಬುದು ಕೇವಲ ಊಹಾಪೋಹ’ ಎಂದು ಸ್ಪಷ್ಟಪಡಿಸಿದೆ.
ಆಧಾರ್ ಇಂದುಗೊಳಿಸುವಿಕೆ: ಆಧಾರ್ ಕಾರ್ಡ್ನಲ್ಲಿ ವಿವರಗಳನ್ನು ಉಚಿತವಾಗಿ ಇಂದುಗೊಳಿಸಲು (ಅಪ್ಡೇಟ್ ಮಾಡಿಸಲು) ಇರುವ ಗಡುವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಡಿ. 14ರವರೆಗೆ ವಿಸ್ತರಿಸಿದೆ. ಆಧಾರ್ ಕಾರ್ಡ್ ದಾರರು ತಮ್ಮ ವಿಳಾಸ, ಹೆಸರು, ಜನ್ಮ ದಿನಾಂಕ ಮುಂತಾದ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ಬದಲಾವಣೆ ಮಾಡಿಸಬಹುದು. ಈ ದಿನಾಂಕದ ನಂತರ ಮಾಡಿಸುವುದಾದರೆ ಪ್ರಕ್ರಿಯಾ ಶುಲ್ಕ ತೆರಬೇಕಾಗುತ್ತದೆ.
ವಿಳಂಬಿತ ಐಟಿಆರ್ ಸಲ್ಲಿಕೆ: ತಮ್ಮ 2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್್ಸ (ಐಟಿಆರ್) ಅನ್ನು ಜು. 31ರ ಗಡುವಿನೊಳಗೆ ಸಲ್ಲಿಸಲು ವಿಫಲರಾಗಿರುವವರು ವಿಳಂಬವಾಗಿ, 5 ಸಾವಿರ ರೂ. ದಂಡ ಶುಲ್ಕದೊಡನೆ ಐಟಿಆರ್ ಸಲ್ಲಿಸಲು ಡಿ. 31 ಕೊನೆ ದಿನವಾಗಿದೆ. ಒಟ್ಟಾರೆ ಆದಾಯವು 5 ಲಕ್ಷ ರೂ.ಗಿಂತ ಕಡಿಮೆ ಇರುವವರಿಗೆ ದಂಡದ ಪ್ರಮಾಣವನ್ನು 1 ಸಾವಿರ ರೂ.ಗೆ ಇಳಿಸಲಾಗಿದೆ.
ಅಡುಗೆ ಅನಿಲ ದರ ಏರಿಕೆ?: ತೈಲ ಕಂಪನಿಗಳು ಅಡುಗೆ ಅನಿಲ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ತಿಂಗಳಂತೆ ಪರಿಷ್ಕರಿಸಲಿದ್ದು, ಭಾನುವಾರ ಹೊಸ ದರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರವೃತ್ತಿ, ನೀತಿಗಳು, ಪ್ರಸಕ್ತ ಅಲ್ಲಿ ಅಸ್ತಿತ್ವದಲ್ಲಿರುವ ಬೆಲೆ ಮುಂತಾದ ಅಂಶಗಳು ಬೆಲೆ ಏರಿಳಿತದ ಮೇಲೆ ಪರಿಣಾಮ ಬೀರುತ್ತವೆ.