ಎಚ್.ಡಿ.ಕೋಟೆ: ಬಡವರು, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸವಲತ್ತು ಒದಗಿಸಬೇಕೆಂಬ ದೃಷ್ಟಿಯಿಂದ ರಾಜ್ಯ ಸರ್ಕಾರ 5 ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲೂಕಿನ ಕೆ.ಆರ್.ಪುರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣದ ಮೊದಲನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಸಂವಿಧಾನದ ತತ್ವ-ಸಿದ್ಧಾಂತಗಳನ್ನು ಎತ್ತಿಹಿಡಿದಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ನಾವು ಸಂವಿಧಾನ ಪೀಠಿಕೆ ಓದಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ ಎಂದರು.
ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಹಾಗೂ ಗ್ರಾಮದ ಹಾಡಿ ನಿವಾಸಿಗಳಿಗೆ ಶೌಚಗೃಹ ನಿರ್ಮಿಸುವಂತೆ ಇದೇ ವೇಳೆ ಕೆ.ಆರ್.ಪುರ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು.
ಶಾಸಕ ಅನಿಲ್ ಚಿಕ್ಕಮಾದು, ಸಾರನಾಥ ಬುದ್ಧ ವಿಹಾರದ ಗೌತಮಿ ಬಂತೇಜಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಂ.ಮಹೇಶ್, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಜಾಕ್, ಕಾಂಗ್ರೆಸ್ ಮುಖಂಡ ಸತೀಶ್‌ಗೌಡ, ಉದ್ಯಮಿ ನಿಂಗರಾಜು, ನಾಗನಹಳ್ಳಿ ಪ್ರದೀಪ್, ರಾಜು ವಿಶ್ವಕರ್ಮ, ಮಮತಾ ವೆಂಕಟೇಶ್, ಹಿರೇಹಳ್ಳಿ ಸೋಮೇಶ್, ಗಣೇಶಾಚಾರ್ ಇತರರಿದ್ದರು.
ಧ್ರುವನಾರಾಯಣ ನನ್ನ ರಾಜಕೀಯ ಗುರುಗಳು. ಅವರ ಹಾಕಿಕೊಟ್ಟ ಮಾರ್ಗದಲ್ಲೇ ನಾನು ಸಾಗುತ್ತಿದ್ದೇನೆ. ನಾನು ಈ ಕ್ಷೇತ್ರದಲ್ಲಿ 2 ಬಾರಿ ಶಾಸಕನಾಗಲು ಸಂವಿಧಾನ ನನಗೆ ಅವಕಾಶ ಮಾಡಿಕೊಟ್ಟಿದೆ. ಈ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಮುಂದೆಯೂ ಅನೇಕ ಕೆಲಸಗಳನ್ನು ಮಾಡಲಾಗುವುದು.
ಅನಿಲ್ ಚಿಕ್ಕಮಾದು ಶಾಸಕ