ನ್ಯೂಸ್

ವಾಯು ಗುಣಮಟ್ಟ ನಿಗಾ ವ್ಯವಸ್ಥೆ ಅಳವಡಿಕೆ ಕಡ್ಡಾಯ : ಕೆಎಸ್‌ಪಿಸಿಬಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕೈಗಾರಿಕೆ ಮತ್ತು ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಸ್ವಯಂಚಾಲಿತ ನಿರಂತರ ವಾಯು ಗುಣಮಟ್ಟ ನಿಗಾ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್ ಸೂಚಿಸಿದೆ.

ಪರವಾನಗಿ ಪಡೆಯದೆ ನಡೆಸಲಾಗುತ್ತಿರುವ ಬಾಳೇಕಾಯಿ ಚಿಪ್ಸ್ ಉತ್ಪಾದನಾ ಘಟಕವನ್ನು ನಿರ್ಬಂಧಿಸುವಂತೆ ಶೃಂಗೇರಿ ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಜನರಿಗೆ ಮಾಲಿನ್ಯಮುಕ್ತ ವಾತಾವರಣ ಲಭ್ಯವಾಗುವಂತೆ ಮಾಡಲು ಕೆಎಸ್‌ಪಿಸಿಬಿಯು ವಾಯು ಮತ್ತು ಜಲ ಕಾಯ್ದೆ ನಿರ್ವಹಿಸುವ ಸೂಕ್ತ ವ್ಯವಸ್ಥೆ ತರಬೇಕಾಗಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಜನಸಂಖ್ಯೆ ಮೇಲೆ ಪರಿಣಾಮ ಬೀರುವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಯುಗದಲ್ಲಿ ಕೆಎಸ್‌ಪಿಸಿಬಿ ಅಥವಾ ರಾಜ್ಯಕ್ಕೆ ವೆಚ್ಚವು ಅಡ್ಡಿಯಾಗುವುದಿಲ್ಲ. ಸಂವಿಧಾನದ 21ನೇ ವಿಧಿಯಡಿ ಜೀವಿಸುವುದು ಮೂಲಭೂತ ಹಕ್ಕಾಗಿದೆ. ಹಾಗಾಗಿ ದೇಶದ ಪ್ರಜೆಗಳು ಮಾಲಿನ್ಯಗೊಂಡಿರುವ ಪರಿಸರದಲ್ಲಿ ವಾಸಿಸುವ ಮೂಲಕ ರೋಗದಿಂದ ಬಳಲುವಂತೆ ಮಾಡಲಾಗದು. ಈ ಹಿನ್ನೆಲೆಯಲ್ಲಿ, ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ಆರು ವಾರಗಳಲ್ಲಿ ರಾಜ್ಯಾದ್ಯಂತ ವಾಯು ಗುಣಮಟ್ಟ ನಿಗಾ ವ್ಯವಸ್ಥೆ ಕುರಿತಾದ ವಿಸ್ತೃತ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ದೂರು ಸ್ವೀಕಾರವಾದ ತಕ್ಷಣ ಸ್ಥಳ ಪರಿಶೀಲಿಸಬೇಕು ಮತ್ತು ಅವುಗಳ ಪರಿಶೀಲನೆಗಾಗಿ ಮಾದರಿಗಳನ್ನು ಸಂಬಂಧಿತ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ನ್ಯಾಯಾಲಯ ಹೇಳಿದೆ. ದೂರುಗಳನ್ನು ಆಧರಿಸಿ ಮಾಲಿನ್ಯದ ಮೇಲೆ ನಿಗಾ ಇಡುವುದಲ್ಲ. ಈ ಸಂಬಂಧ ಕೆಎಸ್‌ಪಿಸಿಬಿಯು ನಿರಂತರವಾಗಿ ನಿಗಾ ವ್ಯವಸ್ಥೆ ರೂಪಿಸಬೇಕಿದೆ ಎಂದಿದೆ.