ಶಿಕಾರಿಪುರ: ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಕ್ರಾಂತಿಕಾರಿ ರಥಯಾತ್ರೆಯು ಬುಧವಾರ ಪಟ್ಟಣಕ್ಕೆ ಆಗಮಿಸಿತು. ಹೋರಾಟ ಸಮಿತಿ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ರಥಯಾತ್ರೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸ್ವಾಗತಿಸಲಾಯಿತು. ಡಾ. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಸಂವಿಧಾನ ಮತ್ತು ಡಾ. ಅಂಬೇಡ್ಕರ್ ಪರವಾಗಿ ಘೋಷಣೆ ಕೂಗಲಾಯಿತು.
ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಆಸಕ್ತಿಯಿಲ್ಲ. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವುದು ಪ್ರಚಾರಕ್ಕೆ ಸೀಮಿತವಾಗಿದೆ. ಕಳೆದ ಆರು ತಿಂಗಳಿನಿಂದ ನೆಪ ಹೇಳಲಾಗುತ್ತಿದೆ. ದಲಿತರ ಮತಗಳನ್ನು ಗಳಿಸಲು ಓಲೈಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಹೋರಾಟ ಯಾರ ವಿರುದ್ಧವಲ್ಲ. ಇದು ನಮ್ಮ ಪಾಲಿನ ಹಕ್ಕುಗಳನ್ನು ಪಡೆಯಲು ನಡೆಸುತ್ತಿರುವ ಹೋರಾಟ. ಒಳ ಮೀಸಲಾತಿ ಜಾರಿ ಆಗುವವರೆಗೆ ಹೋರಾಟ ನಿಲ್ಲುವುದಿಲ್ಲ. ಒಳಮೀಸಲಾತಿಗಾಗಿ ಹೋರಾಡುತ್ತಿರುವವರಲ್ಲಿ 101 ಎಸ್‌ಸಿ ಸಮುದಾಯಗಳಿವೆ. ಸರ್ಕಾರ ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಶೀಘ್ರವೇ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಒಳಮೀಸಲಾತಿ ಸಮಿತಿ ತಾಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ, ನಮ್ಮ ಕೂಗು ಇನ್ನೂ ರಾಜ್ಯ ಸರ್ಕಾರದ ಕಿವಿಗೆ ಬಿದ್ದಂತಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಒಳ ಮೀಸಲಾತಿ ಜಾರಿಗೊಳಿಸಿ ಹಿಂದುಳಿದವರ ಬದುಕಿಗೆ ಬೆಳಕಾಗಬೇಕು ಎಂದರು.
ಹಿಂದುಳಿದ ವರ್ಗಗಳ ಸಮಾಜದ ಮುಖಂಡ ನಿಂಗಪ್ಪ, ಬಿಎಸ್‌ಎನ್‌ಎಲ್ ಶಿವಪ್ಪ, ಹೊಳಿಯಪ್ಪ, ಸುರೇಶ್ ಇತರರಿದ್ದರು.