ಜಿಪಂನಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ ಮಾತನಾಡಿದರು. 
ನ್ಯೂಸ್

ತಿಂಗಳಲ್ಲಿ ಇ-ಆಫೀಸ್ ಜಾರಿಗೊಳಿಸಿ; ರಾಜೇಂದ್ರಕುಮಾರ್ ಕಟಾರಿಯ ನಿರ್ದೇಶನ

ಚಿಕ್ಕಮಗಳೂರು: ಮುಂದಿನ ಒಂದು ತಿಂಗಳೊಳಗೆ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಪದ್ಧತಿ ಜಾರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಾಯೋಗಿಕವಾಗಿ ಕಂದಾಯ ಇಲಾಖೆ ಉಪ ವಿಭಾಗಗಳಲ್ಲಿ ಪ್ರಾರಂಭಿಸಿದ್ದು ಪರಿಣಾಮಕಾರಿಯಾಗಿ ಕೆಸಗಳು ಆಗುತ್ತಿವೆ ಎಂದರು.
ಪ್ರತಿ ಇಲಾಖೆಯಲ್ಲೂ ಪಾರದರ್ಶಕವಾಗಿ ಸಾರ್ವಜನಿಕರ ಕೆಲಸ ಆಗಬೇಕು ಎಂಬುದು ಉದ್ದೇಶವಾಗಿದೆ. ಯಾವುದೇ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ತಿಂಗಳಾನುಗಟ್ಟಲೆ ಅರ್ಜಿದಾರ ಕಚೇರಿಗೆ ಅಲೆದಾಡಬೇಕಾಗಿತ್ತು. ಇದರಿಂದಾಗಿ ಇಲಾಖೆ ಮೇಲೆ ಕೆಟ್ಟ ಭಾವ ಮೂಡುತ್ತಿತ್ತು. ಆ ವ್ಯವಸ್ಥೆ ಸರಿಪಡಿಸುವ ಹಾಗೂ ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಿ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಅಧಿಕಾರಿಗಳು ಇದಕ್ಕೆ ಬೇಕಾಗಿರುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇ-ಆಫೀಸ್ ಜಾರಿಯಾದ ನಂತರವೂ ಅಧಿಕಾರಿಗಳು ಕಡತ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷೃ ತೋರಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ತಕರಾರು ವಿಚಾರಗಳು ಇದ್ದಲ್ಲಿ ಹಿಂಬರಹ ಕೊಡಲು ಅವಕಾಶವಿದೆ. ಇದರಿಂದಾಗಿ ಸಮಯ ಪಾಲನೆಯಾಗುವುದರ ಜತೆಗೆ ಇಲಾಖೆ ಸಾರ್ವಜನಿಕರ ನಂಬಿಕೆ ಗಿಟ್ಟಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲೆ ಬಹಳ ಸೂಕ್ಷ್ಮ ಪ್ರದೇಶವಾಗಿದ್ದು ಜನತೆ ವಿಭಿನ್ನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರಿಗೆ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸುವ ಮೂಲಕ ಪರಿಹಾರ ಕಲ್ಪಿಸಬೇಕು. ಕಚೇರಿಯಿಂದ ಹೊರ ಬಂದು ಜನರ ಸಮಸ್ಯೆಗಳು ಏನು ಎಂಬುದರ ಬಗ್ಗೆ ಅರಿವು ಪಡೆದುಕೊಳ್ಳಿ, ಅವರು ನಿಮ್ಮ ಬಳಿ ಬರುವ ಮೊದಲೇ ಸಮಸ್ಯೆಗೆ ಶಾಶ್ವತವಾಗಿ ಬಗೆಹರಿಸಿ ಎಂದು ತಾಕೀತು ಮಾಡಿದರು.
ಕಂದಾಯ ಮತ್ತು ಡೀಮ್ಡ್ ಅರಣ್ಯ ಜಾಗ ಸರ್ವೇ ಪ್ರಗತಿಯಲ್ಲಿದ್ದು ಸರ್ವೇ, ತಹಸೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಮೂಡಿಗೆರೆ ತಾಲೂಕಿನಿಂದ ಸರ್ವೇ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ರಾಜೇಶ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜೇಂದ್ರಕುಮಾರ್ ಕಟಾರಿಯ, ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವಿದೆ. ಡೀಮ್ಡ್ ಅರಣ್ಯ ಪ್ರದೇಶ ಎಲ್ಲಿದೆ? ಕಂದಾಯ ಜಮೀನು ಎಲ್ಲಿದೆ? ಎಂಬುದರ ಸರ್ವೇ ಮಾಡಿ ಗಡಿ ಗುರುತಿಸಬೇಕು. ಡೀಮ್ಡ್ ಜಾಗದಲ್ಲಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು.
ಗುಣಾತ್ಮಕ ಫಲಿತಾಂಶ ಸುಧಾರಣೆಗೆ ಕ್ರಿಯಾಯೋಜನೆ ರೂಪಿಸಿದ್ದು, ಹಂತಹಂತವಾಗಿ ಜಾರಿಗೆ ತರಲಾಗುತ್ತಿದೆ. ಕಿರುಪರೀಕ್ಷೆ, ಪೂರ್ವ ಪರೀಕ್ಷೆಗಳಲ್ಲಿ ಮಕ್ಕಳು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚಾಗಿ ಅನುತ್ತೀರ್ಣರಾಗುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಲೋಕೇಶ್ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ರ‌್ಯಾಂಕ್ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಅವರಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿಲ್ಲ. ಇದಕ್ಕೆ ಇಲಾಖೆಯಿಂದ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಆದರೂ ಯಾಕೆ ಕ್ರಮಕೈಗೊಂಡಿಲ್ಲ. ವಿಷಯವಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಲು ಕಾರಣವೇನು ಎಂಬುದನ್ನು ಯಾಕೆ ಅವಲೋಕನ ಮಾಡಿಲ್ಲ? ಮಕ್ಕಳಿಗೆ ಪಾಠ ಬೋಧನೆ ಮಾಡಿದರೆ ಸಾಲದು, ಮೌಲ್ಯಯುತ, ಗುಣಾತ್ಮಕ ಶಿಕ್ಷಣ ನೀಡಬೇಕು. ಶೈಕ್ಷಣಿಕ ಪ್ರಗತಿಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 29 ವಾರಗಳಿಗೆ ಆಗುವಷ್ಟು ಮೇವಿದೆ. ಕೊರತೆಯಾದರೆ ರೈತರಿಗೆ ಮೇವಿನ ಕಿಟ್ ವಿತರಣೆಗೆ ದಾಸ್ತಾನು ಮಾಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಮೋಹನ್‌ಕುಮಾರ್ ತಿಳಿಸಿದರು. ಮೇವು ಲಭ್ಯವಿದೆ ಎಂದು ಯಾವ ಆಧಾರದ ಮೇಲೆ ಅಂದಾಜಿಸುತ್ತೀರಾ ಎಂದು ರಾಜೇಂದ್ರಕುಮಾರ್ ಕಟಾರಿಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೋಹನ್‌ಕುಮಾರ್ ಕೃಷಿ ಇಲಾಖೆಯಿಂದ ರೈತರು ಮೇವು ಸಂಗ್ರವಾಗುವಂಥ ಬೆಳೆಗಳನ್ನು ಬೆಳೆಯುತ್ತಾರೆ ಹಾಗೂ ಮಳೆ ಆಧಾರದಲ್ಲಿ ಅಂದಾಜಿಸಲಾಗಿದೆ ಎಂದರು. 100 ಜಾನುವಾರುಗಳಿಗೆ ಎಷ್ಟು ಗೋಮಾಳ ಪ್ರದೇಶ ಇರಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಲು ಉಪನಿರ್ದೇಶಕ ತಡಬಡಿಸಿದರು. 100 ಜಾನುವಾರುಗಳಿಗೆ 12 ಎಕರೆಯಷ್ಟು ಗೋಮಾಳವಿರಬೇಕು. ನೀವು ಕೇವಲ ಇಲಾಖೆಯ ಮಾಲೀಕರಲ್ಲ. ಸಂಬಂಧಪಟ್ಟ ಸಾಮಾನ್ಯ ಮಾಹಿತಿ ಪಡೆದುಕೊಂಡಿಲ್ಲ ಎಂದರೆ ಏನರ್ಥ ಎಂದು ಹರಿಹಾಯ್ದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಾಗಿದ್ದು ನಗರ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಜಲಜೀವನ ಮಿಷನ್ ಯೋಜನೆಯನ್ನು ಪ್ರತಿ ಗ್ರಾಮದಲ್ಲೂ ಅನುಷ್ಠಾನಗೊಳಿಸಬೇಕು ಎಂದು ರಾಜೇಂದ್ರಕುಮಾರ್ ಕಟಾರಿಯ ಸೂಚಿಸಿದರು. ಇದಕ್ಕೆ ಉತ್ತರಿಸಿದ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್, ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಟೆಂಡರ್ ಕರೆದರೆ ಗುತ್ತಿಗೆ ಪಡೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಎರಡ್ಮೂರು ಹಳ್ಳಿಗಳನ್ನು ಸೇರಿಸಿ ಟೆಂಡರ್ ಕರೆದರೆ ಸರಿಯಾಗುಯವುದು ಎಂದು ಹೇಳಿದರು.
ಯಾವುದೇ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದಾಗ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು ಎಂದು ರಾಜೇಂದ್ರಕುಮಾರ್ ಕಟಾರಿಯ ಅಧಿಕಾರಿಗಳಿಗೆ ಸೂಚಿಸಿದರು. ಬಾಕಿ ಇರುವ ಕೆಲಸಗಳಿಗೆ ಅನುದಾನ ಬೇಕಾಗಿದ್ದರೆ ಕೂಡಲೇ ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿಕೊಡಬೇಕು. ತಡ ಮಾಡಿದರೆ ಅನುದಾನ ಸಿಗುವುದಿಲ್ಲ. ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದರು.
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಮ ಅಮಟೆ ಹಾಜರಿದ್ದರು.