ಮುಂಬೈ: ಅದಾನಿ ಗ್ರೂಪ್ ಷೇರುಗಳು ಜೂನ್ 4 ರಂದು ಭಾರೀ ಹಿನ್ನಡೆ ಅನುಭವಿಸಿವೆ. ಈ ಸಮೂಹದ ಕಂಪನಿಗಳ ಷೇರುಗಳು 18% ರವರೆಗೆ ಕುಸಿತ ಕಂಡಿವೆ. ಕಳೆದ ಕೆಲವು ವಹಿವಾಟು ಅವಧಿಗಳಲ್ಲಿ ವ್ಯಾಪಕ ಲಾಭದ ನಂತರ ಈ ತೀವ್ರ ಕುಸಿತ ಕಂಡುಬಂದಿದೆ.
ಈ ಕುಸಿತವು ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದ್ದು, ರೂ 10 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಬಂಡವಾಳ ಕುಸಿತವಾಗಿದೆ. ಬೆಳಗಿನ ವಹಿವಾಟಿನ ಸಮಯದಲ್ಲಿ, ಅದಾನಿ ಟೋಟಲ್ ಗ್ಯಾಸ್ ಅತಿಹೆಚ್ಚು ನಷ್ಟ ಕಂಡಿತು. ಈ ಷೇರು 18% ರಷ್ಟು ಕುಸಿದಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ 12% ರಷ್ಟು ಕುಸಿತ ಅನುಭವಿಸಿದರೆ, ಅದಾನಿ ಪವರ್ 10% ಕ್ಕಿಂತ ಹೆಚ್ಚು ನಷ್ಟ ಕಂಡಿತು. ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಎಂಟರ್‌ಪ್ರೈಸಸ್ ಶೇ. 7ರಷ್ಟು ಕುಸಿತ ದಾಖಲಿಸಿವೆ. ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೇಷಲ್ ಎಕನಾಮಿಕ್ಸ್ ಜೋನ್ 8%, ಅದಾನಿ ವಿಲ್ಮಾರ್ 8.5%, ಅಂಬುಜಾ ಸಿಮೆಂಟ್ 9.6%, ಎಸಿಸಿ 9% ಮತ್ತು ಎನ್ಡಿಟಿವಿ 12% ರಷ್ಟು ಕುಸಿತ ಕಂಡಿವೆ.
ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಗ್ರೂಪ್‌ನ ಮಾರುಕಟ್ಟೆ ಬಂಡವಾಳೀಕರಣವು ಸಾಕಷ್ಟು ಕುಸಿತ ಕಂಡಿತ್ತು. ಮಾರ್ಚ್ 2024ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಅದಾನಿ ಗ್ರೂಪ್‌ನ ಸ್ಟಾಕ್ ಬೆಲೆಗಳಲ್ಲಿನ ಏರಿಕೆಯು ಬಲವಾದ ಗಳಿಕೆಯ ಕಾರ್ಯಕ್ಷಮತೆಯಿಂದ ಉತ್ತೇಜಿಸಲ್ಪಟ್ಟಿತ್ತು.
ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಗಳು ಸೋಮವಾರ ತೀವ್ರ ಏರಿಕೆ ಕಂಡಿದ್ದವು. ಅದಾನಿ ಪವರ್ 16 ಪ್ರತಿಶತದಷ್ಟು ಏರಿಕೆಯಾಗಿತ್ತು. ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಪವರ್ ಮತ್ತು ಅದಾನಿ ಗ್ರೀನ್ ಸೇರಿದಂತೆ ಈ ಸಮೂಹ ಬಹುತೇಕ ಷೇರುಗಳು ಸೋಮವಾರ ಹಿಂಡೆನ್‌ಬರ್ಗ್ ಪೂರ್ವ ಮಟ್ಟಕ್ಕೆ ಮರಳಿದ್ದವು.