ನ್ಯೂಸ್

ಸುರತ್ಕಲ್‌ನಲ್ಲಿ ಅನೈತಿಕ ಪೊಲೀಸ್‌ಗಿರಿ, ಆರು ಮಂದಿಯ ಬಂಧನ

ಮಂಗಳೂರು: ಸುರತ್ಕಲ್‌ನಲ್ಲಿ ಮತ್ತೊಂದು ಅನೈತಿಕ ಪೊಲೀಸ್‌ಗಿರಿ ನಡೆದಿದೆ. ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳನ್ನು ಸೋಮವಾರ ರಾತ್ರಿ ಹಿಂಬಾಲಿಸಿದ ಯುವಕರು ಬೆದರಿಸಿ ಮಾನಹಾನಿ ಎಸಗಿರುವ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಸ್ಲಿಂ ವಿದ್ಯಾರ್ಥಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ಯುವತಿಯನ್ನು ಸುರತ್ಕಲ್‌ ಇಡ್ಯಾದ ಅಪಾರ್ಟ್‌ಮೆಂಟ್‌ ಬಳಿ ಅಡ್ಡಗಟ್ಟಿ ಅನೈತಿಕ ಪೊಲೀಸ್‌ಗಿರಿ ನಡೆಸಿದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಹ್ಲಾದ್‌, ಪ್ರಶಾಂತ್‌, ಗುರುಪ್ರಸಾದ್‌, ಪ್ರತೀಶ್‌, ಭರತ್‌, ಸುಕೇಶ್‌ ಎಂಬವರು ಬಂಧಿತರು. ಕಾಸರಗೋಡು ಮೂಲದ ಮೊಹಮ್ಮದ್‌ ಯಾಸ್ಮೀನ್‌ ಎಂಬವರು ತಮ್ಮ ಕಾಲೇಜಿನವರೇ ವಿದ್ಯಾರ್ಥಿನಿ ಆನ್ಸಿ ವಿನ್ನಿ ಡಯಾಸ್‌ ಎಂಬವರನ್ನು ಅವರ ಕೋರಿಕೆಯಂತೆ ಮುಕ್ಕದ ಕಾಲೇಜು ಬಳಿಯಿಂದ ರಾತ್ರಿ ೧೦ ಗಂಟೆಗೆ ಬೈಕ್ ನಲ್ಲಿ ಕರೆದುಕೊಂಡು ಇಡ್ಯಾದ ಅಪಾರ್ಟ್‌ಮೆಂಟ್‌ಗೆ ಬರುತ್ತಿದ್ದರು. ಅವರನ್ನು ಕಿಡಿಗೇಡಿಗಳು ಬೈಕ್‌ನಲ್ಲಿ ಹಿಂಬಾಲಿಸಿದ್ದರು. ಇಬ್ಬರನ್ನೂ ಬಳಿಕ ಅಡ್ಡಗಟ್ಟಿದ ಯುವಕರು ಆನ್ಸಿಯನ್ನು ಹಿಂದು ಎಂದು ತಿಳಿದಿದ್ದು ನಿನಗೆ ತಿರುಗಲು ಮುಸ್ಲೀಂರೇ ಆಗಬೇಕಾ, ಹಿಂದುಗಳು ಸಿಗುವುದಿಲ್ಲವೇ ಎಂದು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಮೈಗೆ ಕೈ ಹಾಕಿ ಮಾನಹಾನಿ ಎಸಗಿರುವುದಾಗಿ ದೂರಲಾಗಿದೆ.
ಈ ಕುರಿತು ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿದ್ದಲ್ಲದೆ ಆರೋಪಿಗಳನ್ನು ಬಂಧಿಸಿದ್ದಾರೆ.