ನಾಪೋಕ್ಲು: ಗೌರಿಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಆ.27 ರಂದು ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಅತ್ಯಂತ ವಿಜೃಂಭಣೆಯಿಂದ ಭಾನುವಾರ ಶೋಭಾಯಾತ್ರೆಯೊಂದಿಗೆ ನಡೆಯಿತು.
ಇಲ್ಲಿನ ಕಕ್ಕುಂದ ಕಾಡಿನ ವೆಂಕಟರಮಣ ದೇವಸ್ಥಾನದ ಗಣಪತಿ ಸೇವಾ ವತಿಯಿಂದ 20ನೇ ವರ್ಷದ ಅದ್ದೂರಿ ಗೌರಿ ಗಣೇಶಉತ್ಸವ ಸಮಿತಿ ವತಿಯಿಂದ ಭಾನುವಾರ ಮಧ್ಯಾಹ್ನ ಮಹಾ ಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸುಳ್ಯದ ನಾಸಿಕ್ ಬ್ಯಾಂಡ್ ಕಲಾ ತಂಡದೊಂದಿಗೆ ಪಟ್ಟಣದಲ್ಲಿ ಅಲಂಕೃತ ಮಂಟಪ ರಂಜಿಸಿತು. ಸಂಜೆ ಇಲ್ಲಿಯ ಸಂತೆ ಮೈದಾನದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಸೇವಾ ಸಮಿತಿ ಅಧ್ಯಕ್ಷ ತಂಗ, ಕಾರ್ಯದರ್ಶಿ ಮಹೇಶ್, ಖಜಾಂಜಿ ಸೂರ್ಯಕುಮಾರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಇಂದಿರಾನಗರದ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 20ನೇ ವರ್ಷದ ಅದ್ದೂರಿ ಗೌರಿ ಗಣೇಶ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ, ಓಂಕಾರ್ ರವಿ ಬಳಗದಿಂದ ಸಂಗೀತ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಭಾನುವಾರ ಸಂಜೆ ಪಂಚಮುಖಿ ಗಣಪತಿಯ ಅತ್ಯಾಕರ್ಷಕ ಪ್ರತಿರೂಪದೊಂದಿಗೆ ಸೌಂಡ್ಸ್, ಲೈಟಿಂಗ್ಸ್ ವಿಶೇಷವಾಗಿತ್ತು. ಈ ಸಂದರ್ಭ ಸೇವಾ ಸಮಿತಿದು ಅಧ್ಯಕ್ಷ ಹರಿದಾಸ್, ಉಪಾಧ್ಯಕ್ಷ ಶಶಿ, ಕಾರ್ಯದರ್ಶಿ ಸುನಿಲ್, ಖಜಾಂಜಿ ವಿನಿಲ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಹಳೇ ತಾಲೂಕು ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ 16ನೇ ವರ್ಷದ ಅದ್ದೂರಿ ಗೌರಿ-ಗಣೇಶ ಉತ್ಸವದಲ್ಲಿ ಮಡಿಕೇರಿ ರಾಕಿ ತಂಡದಿಂದ ವಿಶೇಷವಾಗಿ ಚಲಿಸುವ ಬೃಹತ್ ಗಾತ್ರದ ದೇವತೆಗಳ, ರಾಕ್ಷಸರ ಪ್ರತಿರೂಪದೊಂದಿಗೆ ಪೌರಾಣಿಕ ಕಥಾವಸ್ತು ಟ್ಯಾಬ್ಲೋ, ಸೌಂಡ್ಸ್ ಮತ್ತು ಲೈಟಿಂಗ್ ಪ್ರದರ್ಶನ ಸಾರ್ವಜನಿಕರನ್ನು ರೋಮಾಂಚನಗೊಳಿಸಿ ರಂಜಿಸಿದ್ದು. ಈ ಸಂದರ್ಭ ಸಮಿತಿ ಅಧ್ಯಕ್ಷ ದಿಲೀಪ್, ಉಪ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಪ್ರದೀಸ್, ಖಜಾಂಜಿ ಚೇತನ್ ಸಮಿತಿ ಸದಸ್ಯರು ಜತೆಗಿದ್ದರು.
ನಾಪೋಕ್ಲು ನಾಡು ಗೌರಿ-ಗಣೇಶ ಸಮಿತಿ ವತಿಯಿಂದ ಹಳೇ ತಾಲೂಕಿನ ಭಗವತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶನ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪ ಅತ್ಯಾಕರ್ಷಕವಾಗಿತ್ತು. ಅಧ್ಯಕ್ಷ ಕಲಿಯಂಡ ವಿಠಲ ಮುದ್ದಯ್ಯ, ಕಾರ್ಯದರ್ಶಿ ಶಿವಚಾಳಿಯಂಡ ಜಗದೀಶ್, ಸಮಿತಿ ಸದಸ್ಯರು, ವಿವಿಧ ಸೇವಾ ಸಮಿತಿಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಆಕರ್ಷಕ ವಿದ್ಯುತ್ ದೀಪ ಅಲಂಕೃತ ವಾಹನದಲ್ಲಿರಿಸಿ ಸಿಡಿಮದ್ದು, ವಿಶೇಷ ವಾದ್ಯಮೇಳ ಹಾಗೂ ಸೌಂಡ್ಸ್‌ನೊಂದಿಗೆ ಸಾರ್ವಜನಿಕರು ಕುಣಿದು ಕುಪ್ಪಳಿಸುವುದರೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಅಲಂಕೃತ ವಾಹನಗಳಲ್ಲಿ ಕೊಂಡೊಯ್ದು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.
ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಜನಸಾಗರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠರಾದ ರಾಮರಾಜನ್ ಆಗಮಿಸಿ ಅವರ ಮಾರ್ಗದರ್ಶನದಂತೆ, ಡಿವೈಎಸ್‌ಪಿ ಸೂರಜ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಇಲ್ಲಿಯ ಠಾಣಾಧಿಕಾರಿ ರಾಘವೇಂದ್ರ ಮತ್ತು ಸಿಬ್ಬಂದಿ ವಿಶೇಷ ಬಂದೋಬಸ್ತ್ ಏರ್ಪಡಿಸಲಾಗಿತ್ತು.