ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ-ಗಣಪತಿ ವಿಸರ್ಜನೆ ಮೆರವಣಿಗೆಯು ಭಜನೆ, ಕುಣಿತದೊಂದಿಗೆ ಅದ್ದೂರಿಯಾಗಿ ಮಂಗಳವಾರ ನೆರವೇರಿತು. 
ನ್ಯೂಸ್

ಬೇಟೋಳಿಯಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ

ವಿರಾಜಪೇಟೆ: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಒಳ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಮಂಗಳವಾರ ನೆರವೇರಿತು.

ದೇವಸ್ಥಾನವು 43ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಗಣೇಶ ಚತುರ್ಥಿ ಅಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಒಟ್ಟು ಏಳು ದಿವಸಗಳವರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳೊಂದಿಗೆ ಆರಾಧಿಸಲಾಯಿತು. ವಿಸರ್ಜನೋತ್ಸವದಂದು ಮಧ್ಯಾಹ್ನ ಮಹಾಪೂಜೆಯನ್ನು ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣಾ ಸೇವೆ ಜರುಗಿತು.

ವಿಶೇಷ ಪ್ರಾರ್ಥನೆ, ಪೂಜೆಯನ್ನು ಸಲ್ಲಿಸುವುದರ ಮೂಲಕ ಹೂವಿನ ಅಲಂಕೃತ ಮಂಟಪದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತಾದಿಗಳು ಹಾಗೂ ಗ್ರಾಮಸ್ಥರು ಪೂಜೆಯನ್ನು ಮಹಾಗಣಪತಿಗೆ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನೆಯ ತಂಡ ಹಾಗೂ ಸ್ಥಳೀಯ ಮಕ್ಕಳಿಂದ ಕುಣಿತ, ಭಜನೆ ಮೆರವಣಿಗೆ ಉದ್ದಕ್ಕೂ ಸಾಗಿ ಆಕರ್ಷಣೆಯನ್ನು ಹೆಚ್ಚಿಸಿತು.

ಕಲಾ ತಂಡದವರು ಗೊಂಬೆ ವೇಷವನ್ನು ಧರಿಸಿ ನೃತ್ಯ ಮಾಡಿದರು. ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ ಜರುಗಿತು. ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು. ಕೊನೆಗೆ ಶ್ರೀ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಜರುಗಿತು.

ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಅವರು ನೆರವೇರಿಸಿದರು. ತದನಂತರ ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ಮಹಾಗಣಪತಿ ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯವರು, ಗ್ರಾಮಸ್ಥರು, ಉಪಸ್ಥಿತರಿದ್ದರು.