ಕುಂದಾಪುರ ತಾಪಂ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ಗ್ರಾಪಂ ಅಧ್ಯಕ್ಷರು, ಪಿಡಿಒ, ಜೆಜೆಎಂ ಹಾಗೂ ಹೆದ್ದಾರಿ ಇಲಾಖಾ ಅಧಿಕಾರಿಗಳ ಸಭೆ ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆಯಿತು 
ನ್ಯೂಸ್

ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ : ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚನೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಯಾಣಿಕರ ಸುರಕ್ಷೆಗೆ ಆದ್ಯತೆ ನೀಡಬೇಕು. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಬೈಂದೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜಲಜೀವನ್ ಮಿಷನ್(ಜೆಜೆಎಂ) ಯೋಜನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ಗ್ರಾಪಂ ಅಧ್ಯಕ್ಷರು, ಪಿಡಿಒ, ಜೆಜೆಎಂ ಹಾಗೂ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ಒಂದು ಹಂತದವರೆಗೆ ವೇದಿಕೆಯಲ್ಲಿ ಕುಳಿತು ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚಿಸುತ್ತೇನೆ. ಆದರೆ ಇಲಾಖೆ ಸ್ಪಂದಿಸದಿದ್ದರೆ ವೇದಿಕೆಯಿಂದ ಇಳಿದು ಯಾವುದೇ ಮುಲಾಜಿಲ್ಲದೇ ಜನರ ಜತೆ ಭಾಗಿಯಾಗುತ್ತೇನೆಯೇ ವಿನಾ ಇಲಾಖೆ ಜತೆ, ಗುತ್ತಿಗೆದಾರರ ಜತೆ ನಿಲ್ಲುವುದಿಲ್ಲ. ಪಂಚಾಯಿತಿಯವರು ಹೇಳುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲೇಬೇಕು. ಗುತ್ತಿಗೆದಾರರಿಗೆ 10 ದಿನಗಳ ಗಡುವು ನೀಡಲಾಗುತ್ತಿದೆ ಎಂದರು.

ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರಿನಲ್ಲಿ ಚರಂಡಿ ನೀರು ಸಂಪೂರ್ಣ ಹೆದ್ದಾರಿಯಲ್ಲೇ ಹರಿಯುತ್ತಿದ್ದು, ವಾಹನ ಸವಾರರಿಗೆ ಮಾತ್ರವಲ್ಲದೆ, ಹೆದ್ದಾರಿ ದಾಟುವ ಮಕ್ಕಳು, ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ. ತಲ್ಲೂರು ಪೇಟೆಯಲ್ಲಿ ಚರಂಡಿ ಇದ್ದರೂ ಅದರಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿದ್ದಲ್ಲದೆ, ಸರಾಗವಾಗಿ ನೀರು ಹೋಗುತ್ತಿಲ್ಲ.

ಬ್ಯಾರಿಕೇಡ್‌ಗಳನ್ನು ಅಡ್ಡಾದಿಡ್ಡಿ ಇರಿಸಲಾಗುತ್ತದೆ. ಖಾಸಗಿಯವರು ಇದನ್ನು ನಿರ್ವಹಿಸುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸಿ ಸಾವು ನೋವುಗಳಾಗುತ್ತಿವೆ ಎಂದರು.ಕ್ಷೇತ್ರದ ಅನೇಕ ಕಡೆಗಳಲ್ಲಿ ಜಲಜೀವನ್ ಮಿಷನ್ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ದೂರು ಕೇಳಿಬರುತ್ತಿವೆ. ಜೆಜೆಎಂ ಕಾಮಗಾರಿಗಳನ್ನು ಶೀಘ್ರವಾಗಿ ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಿಪಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜ್‌ಕುಮಾರ್, ಐಆರ್‌ಬಿ ಇಂಜಿನಿಯರ್ ದಯಾನಂದ ಉಪಸ್ಥಿತರಿದ್ದರು.

ಸಮಸ್ಯೆಗಳ ಆಗರ

ಶಿರೂರಿನಲ್ಲಿ ಸರ್ವೀಸ್ ರಸ್ತೆ ಇಲ್ಲ. ಹೆದ್ದಾರಿ ಬದಿ ಚರಂಡಿ ವ್ಯವಸ್ಥೆ ಇಲ್ಲ. ತಲ್ಲೂರಿನಲ್ಲಿ ಪ್ರವಾಸಿ ಬಳಿ ಡಿವೈಡರ್ ಮುಚ್ಚಲಾಗಿದೆ. ಇದರಿಂದ ತಲ್ಲೂರಿಗೆ ಅಥವಾ ಸಂಗಮ್‌ವರೆಗೆ ಹೋಗಿ ಮರಳಿ ಬರಬೇಕಾಗುತ್ತದೆ. ಅಥವಾ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಕೊಂಡೊಯ್ಯಬೇಕಾಗುತ್ತದೆ. ಆಟೋ ಬಾಡಿಗೆ ಭರಿಸಲು ಬಡವರಿಗೆ ಕಷ್ಟ. ತಲ್ಲೂರು, ಹೆಮ್ಮಾಡಿಯಲ್ಲಿ ಸರ್ವೀಸ್ ರಸ್ತೆಯೇ ಇಲ್ಲ. ಬೇಕಾಬಿಟ್ಟಿ ಬ್ಯಾರಿಕೇಡ್‌ಗಳನ್ನು ಹಾಕಿದ ಕಾರಣದಿಂದಲೂ ಅಪಘಾತ ಸಂಭವಿಸುತ್ತಿದೆ. ಖಾಸಗಿಯವರು ಜಾಹೀರಾತಿಗಾಗಿ ಬ್ಯಾರಿಕೇಡ್‌ಗಳನ್ನು ಹಾಕುತ್ತಾರೆ. ಇದರ ನಿಯಂತ್ರಣ ಯಾರ ಬಳಿ ಇದೆ, ಪೊಲೀಸರೋ, ಹೆದ್ದಾರಿ ಇಲಾಖೆಯೋ ಎಂದು ಸಭೆಯಲ್ಲಿದ್ದವರು ಪ್ರಶ್ನಿಸಿದರು.

ರಸ್ತೆಗೆ ಅಡ್ಡ ಹಾಕಬೇಕೇ?

ಸಭೆಯ ಆರಂಭದಲ್ಲಿ ಹೆದ್ದಾರಿ ಇಲಾಖೆಯಿಂದ ಯಾರೂ ಹಾಜರಾಗಿರಲಿಲ್ಲ. ಸಭೆ ಅರ್ಧ ಮುಗಿದಾಗ ಐಆರ್‌ಬಿ ಗುತ್ತಿಗೆದಾರ ಸಂಸ್ಥೆ ಪ್ರತಿನಿಧಿಗಳು ಬಂದರೂ ಇಲಾಖೆಯಿಂದ ಯಾರೂ ಬರಲಿಲ್ಲ. ಇದರಿಂದ ಸಿಟ್ಟಾದ ಶಾಸಕರು, ಇತ್ತೀಚೆಗೆ ಸಂಸದರು, ಎಸ್‌ಪಿ ಕರೆದ ಸಭೆಗೂ ಹೆದ್ದಾರಿ ಇಲಾಖೆಯವರು ಬರಲಿಲ್ಲ. ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ. ಅವರನ್ನು ರಸ್ತೆಯಲ್ಲೇ ಅಡ್ಡ ಹಾಕಿ ಬರುವಂತೆ ಮಾಡಬೇಕೇ? ಅವರಿಗೆ ಹೇಗೆ ಡ್ರಿಲ್ ಮಾಡಬೇಕೆಂದು ನನಗೆ ತಿಳಿದಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಶಿರೂರು ಟೋಲ್‌ಗೇಟ್‌ನಲ್ಲಿ ಅಡ್ಡ ಹಾಕಲಾಗುವುದು. ಕೋಣೆಯಲ್ಲಿ ಕೂಡಿಹಾಕಿ ಬಿಡಿಸಿಕೊಂಡು ಹೋಗಲು ಅಧಿಕಾರಿಗಳೇ ಬರುವಂತೆ ಮಾಡಲಾಗುವುದು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಇಂತಹ ಅಸಡ್ಡೆ ಸಹಿಸುವುದಿಲ್ಲ ಎಂದರು.

ಪರಿಶೀಲನೆಗೆ ಪಾದಯಾತ್ರೆ

ಬೈಂದೂರಿನಿಂದ ತಲ್ಲೂರುವರೆಗೆ ಹೆದ್ದಾರಿ ಸಮಸ್ಯೆ ಪರಿಶೀಲನೆಗೆ ಪಾದಯಾತ್ರೆಯೇ ಮಾಡಬೇಕಾದೀತು ಎಂದು ಉದಯ ಕುಮಾರ್ ತಲ್ಲೂರು ಹೇಳಿದರು. ಬೀದಿದೀಪಗಳಿಲ್ಲ, ಸಮಸ್ಯೆಗಳನ್ನು ಹೇಳಿದರೂ ಸರಿಪಡಿಸುವುದಿಲ್ಲ. ಸಭೆಗಳಲ್ಲಿ ಹೇಳಿದರೂ, ದೂರುಗಳನ್ನು ನೀಡಿದರೂ ಸ್ಪಂದಿಸುವುದಿಲ್ಲ ಎಂದು ಪಂಚಾಯಿತಿಯವರು ದೂರಿದರು.