ಬೆಂಗಳೂರು: ಜನರ ಹಿತ, ಸಮರ್ಪಕ ಆಡಳಿತದ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ರದ್ದುಪಡಿಸಿ, ಮೂಲ ಸ್ಥಾನಕ್ಕೆ ವಾಪಸ್ ಕರೆಯಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ.
ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೈ ಅವರಿಗೆ ಪತ್ರ ಬರೆದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಅನುಭವವನ್ನು ಪ್ರಸ್ತಾಪಿಸಿದ್ದಾರೆ.
ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಅಲಭ್ಯತೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಸಣ್ಣಪುಟ್ಟ ಕೆಲಸಗಳಿಗೆ ಜನರು ಪದೇ ಪದೆ ತಾಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿಯಿದೆ. ಪರಿಣಾಮವಾಗಿ ಉಳಿದ ಸಿಬ್ಬಂದಿ ಮೇಲೂ ಕೆಲಸದ ಹೊರೆ, ಒತ್ತಡ ಹೆಚ್ಚಾಗಿರುತ್ತದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಜನಸಂದಣಿಯೇ ನೆರೆದಿತ್ತು. ಆದರೆ ಕೆಲಸ ಮಾಡಬೇಕಾದ ಮೊದಲ ದರ್ಜೆ, ದ್ವಿತೀಯ ದರ್ಜೆ ಸಹಾಯಕರು, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ಸೇರಿ 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮೇಲೆ ಇತರೆಡೆ ತೆರಳಿದ್ದರು.
ನಿಗದಿತ ಸಮಯದೊಳಗೆ ತಮ್ಮ ಕೆಲಸಗಳಾಗದೆ ಜನರು ಪರಿತಪಿಸುವಂತಾಗಿತ್ತು. ಕಚೇರಿಯಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಅಧಿಕಾರಿಗಳ ಇಲ್ಲದಿರುವ ಕಾರಣ ತಾವು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಜನರು ದೂರಿದ್ದರು. ಈ ಬಗ್ಗೆ ತಹಸೀಲ್ದಾರ್ ಎಂ.ರೇಣುಕಾ ಬಳಿ ವಿಚಾರಿಸಿದಾಗ ಸಮರ್ಪಕ ಉತ್ತರ ದೊರಕಿರಲಿಲ್ಲವೆಂದು ಕೃಷ್ಣಬೈರೇಗೌಡ ಪತ್ರದಲ್ಲಿ ತಿಳಿಸಿದ್ದಾರೆ.
ಕೂಡ್ಲಿಗಿ ತಾಲೂಕು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ತಾಲೂಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಬಡವರಿದ್ದಾರೆ. ಇವರುಗಳು ಸರ್ಕಾರಿ ಸೇವೆ ಮತ್ತು ಕಚೇರಿಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸದ ಹೊರೆ ಇರುತ್ತದೆ.
ಇಂತಹ ಪರಿಸ್ಥಿತಿಯ ಹೊರತಾಗಿಯೂ ತಾಲೂಕಿನ ಕಂದಾಯ ಇಲಾಖೆಯ 20 ಅಧಿಕಾರಿ/ ಸಿಬ್ಬಂದಿ ನಿಯೋಜನೆ ಮೇರೆ ಬೇರೆ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ವಿಷಾದನೀಯ. ಇದರಿಂದಾಗಿ ಜನಸಾಮಾನ್ಯರು ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ.
ಬೇರೆಡೆಗೆ ನಿಯೋಜನೆ ಮೇಲೆ ತೆರಳಿರುವ ಎಲ್ಲ ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಿರುಗಿಸಲು ಅವಶ್ಯಕ ಕ್ರಮವಹಿಸಬೇಕು. ಹೊಸದಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲಾ ಕಚೇರಿಗೆ ನಿಯೋಜನೆಗೊಂಡ ಅತೀ ಅವಶ್ಯಕ ಸಿಬ್ಬಂದಿಗೆ ತಾತ್ಕಾಲಿಕ ವಿನಾಯಿತಿ ನೀಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಕೃಷ್ಣಬೈರೇಗೌಡ ಸೂಚಿಸಿದ್ದಾರೆ.