Cyclone Fengal: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಫೆಂಗಲ್ ಚಂಡಮಾರುತದ ಅಬ್ಬರ ಇದೀಗ ಮತ್ತಷ್ಟು ಜೋರಾಗಿದ್ದು, ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಬಿರುಸಿನ ಮಳೆಗೆ ತತ್ತರಿಸಿವೆ. ಸೈಕ್ಲೋನ್ಗೆ ಕೇರಳ ಮತ್ತು ತಮಿಳುನಾಡಿನ ಹಲವಾರು ಪ್ರದೇಶಗಳು ಅಕ್ಷರಶಃ ಮಳೆ ನೀರಿನಿಂದ ಮುಳುಗಡೆಯಾಗಿವೆ. ಚಂಡಮಾರುತದ ಪ್ರಭಾವ ರಾಜ್ಯ ರಾಜಧಾನಿಗೆ (Bengaluru) ತಟ್ಟಿದ್ದು, ನಗರದಲ್ಲಿ ಚಳಿ ಜತೆಗೆ ಅಲ್ಲಲ್ಲಿ ಬಿರುಸಿನ ಮಳೆಯಾಗುತ್ತಿದೆ.
ಕೆಲವೆಡೆ ಜಿಟಿಜಿಟಿ ಮಳೆ ಸುರಿದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಜೋರಾಗಿ ಮಳೆ ಸುರಿದಿದೆ. ಫೆಂಗಲ್ ಎಫೆಕ್ಟ್ ರಾಜಧಾನಿಗೆ ಕಾಡುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಬುಧವಾರದವರೆಗೆ (ಡಿ.04) ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಫೆಂಗಲ್ ಚಂಡಮಾರುತದ ಅಬ್ಬರ ಜೋರಿರುವ ಕಾರಣ ಹವಾಮಾನ ಇಲಾಖೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಪುದುಚೇರಿ, ತಮಿಳುನಾಡಿನ ಕೆಲವು ಭಾಗಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದ್ದು, ಪ್ರವಾಹ ಭೀತಿ ಎದುರಾಗಿದೆ ಪುದುಚೇರಿಯಲ್ಲಿ 24 ಗಂಟೆಗಳಲ್ಲಿ 48.4 ಸೆಂ.ಮೀ ಮಳೆ ದಾಖಲಾಗಿದ್ದರೆ, ವಿಲ್ಲುಪುರಂ ಜಿಲ್ಲೆಯ ಮೈಲಂನಲ್ಲಿ ಅತಿ ಹೆಚ್ಚು ಅಂದರೆ 50 ಸೆಂ.ಮೀ ಮಳೆಯಾಗಿದೆ. ತೀವ್ರ ಹವಾಮಾನ ವೈಪರೀತ್ಯದಿಂದ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).