ಬೆಂಗಳೂರು: ಐ ಮಾನಿಟರಿ ಅಡ್ವಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ಮನ್ಸೂರ್ ಖಾನ್ಗೆ ಸದ್ಯ ಜೈಲೇ ಗತಿ!
ಒಂದು ವರ್ಷದಿಂದ ಜೈಲಿನಲ್ಲಿರುವ ಮನ್ಸೂರ್ ಖಾನ್ ಜಾಮೀನಿಗಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡುವಂತೆ ಅರ್ಜಿಯಲ್ಲಿ ಕೋರಿಕೊಂಡಿದ್ದ. ಕೆಲ ದಿನಗಳಿಂದ ಅರ್ಜಿ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರ (ಆ.18)ಕ್ಕೆ ತೀರ್ಪು ಕಾಯ್ದಿರಿಸಿತ್ತು. ಮನ್ಸೂರ್ ಖಾನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ವಿಚಾರಣೆ ನಡೆಸಿತು.
ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾವಿರಾರು ಜನರಿಂದ ಹಣ ಪಡೆದಿದ್ದ ಐಎಂಎ ಕಂಪನಿಯು ಗ್ರಾಹಕರಿಗೆ ಹಣ ಮರಳಿಸಿದೆ ಕೋಟ್ಯಂತರ ರೂ. ವಂಚನೆ ಎಸಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಮನ್ಸೂರ್ಗೆ ಜಾಮೀನು ನೀಡಬಾರದು ಎಂದು ಸಿಬಿಐ ಪರ ಸರ್ಕಾರಿ ಹಿರಿಯ ಅಭಿಯೋಜಕ ಸುದರ್ಶನ್ ವಾದ ಮಂಡಿಸಿದ್ದರು. ನ್ಯಾಯಾಲಯವು ಜಾಮೀನು ಅಜಿರ್ಯನ್ನು ವಜಾಗೊಳಿಸಿದ್ದು, ಮನ್ಸೂರ್ ಖಾನ್ಗೆ ಇನ್ನು ಜೈಲೇ ಗತಿಯಾಗಿದೆ.
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇನ್ನಷ್ಟು ಸಾಕ್ಷಿಗಾಗಿ ಶೋಧ ನಡೆಸುತ್ತಿದ್ದಾರೆ. ದೆಹಲಿ ಇಡಿ ಅಧಿಕಾರಿಗಳು ಮನ್ಸೂರ್ ಹೊಂದಿರುವ ಇನ್ನಷ್ಟು ಆಸ್ತಿಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.