ಬೆಂಗಳೂರು: ಮೂವರು ಸರ್ಕಾರಿ ನೌಕರರ ಬಳಿ ಒಟ್ಟು 9.98 ಕೋಟಿ ರೂ. ಮೌಲ್ಯ ಅಕ್ರಮ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಅಂತಿಮಗೊಳಿಸದ ಕೆಲ ಸರ್ಕಾರಿ ನೌಕರರ ಆಸ್ತಿ ಮೌಲ್ಯವನ್ನು ಇದೀಗ ಪತ್ತೆ ಹಚ್ಚಿದ್ದು, ಬಾಕಿ ಉಳಿದಿದ್ದ ಮೂವರು ಸರ್ಕಾರಿ ನೌಕರರ ಬಳಿ ಒಟ್ಟು 9.98 ಕೋಟಿ ರೂ. ಮೌಲ್ಯ ಅಕ್ರಮ ಆಸ್ತಿ ಪತ್ತೆಯಾಗಿದೆ.
ಗುರುವಾರ ಲೋಕಾಯುಕ್ತ ಪೊಲೀಸರು ಒಟ್ಟು ೧೪ ಸರ್ಕಾರಿ ನೌಕರರ ನಿವಾಸ, ಕಚೇರಿ ಸೇರಿ ೫೦ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ 10 ಮಂದಿಯ ಅಕ್ರಮ ಆಸ್ತಿಯನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಸಂತೋಷ್ ಶರಣಪ್ಪ, ಶಿವಾನಂದ ಮನ್ಕರ್, ಎಸ್.ಭಾರತಿ ಮತ್ತು ಭುವನಹಳ್ಳಿ ನಾಗರಾಜ್ ಅವರ ಆಸ್ತಿ ಮೌಲ್ಯವನ್ನು ಅಂತಿಮಗೊಳಿಸಿರಲಿಲ್ಲ. ಇದೀಗ ಭಾರತಿ ಹೊರತುಪಡಿಸಿ ಇನ್ನುಳಿದ ಮೂವರ ಆಸ್ತಿ ಮೌಲ್ಯವನ್ನು ಅಂತಿಮಗೊಳಿಸಲಾಗಿದೆ. ಮೂವರಿಗೆ ಸೇರಿದ ಸ್ಥಳಗಳನ್ನು ತಪಾಸಣೆ ನಡೆಸಿದಾಗ ಒಟ್ಟು 9.98 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಂದಾಯ ಅಧಿಕಾರಿಯಾಗಿರುವ ಸಂತೋಷ್ ಶರಣಪ್ಪ, ೧.೯೨ ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಫಾರ್ಮ್ ಹೌಸ್, ಖಾಲಿ ನಿವೇಶನ, ಎರಡು ಅಂತಸ್ತಿನ ಮನೆ, ಪಿಜಿ ಮನೆ, ೪೪ ಸಾವಿರ ರೂ. ನಗದು, ೬.೯೮ ಲಕ್ಷ ರೂ. ಬ್ಯಾಂಕ್ ಬಾಲೆನ್ಸ್, ೧೪ ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇನ್ನು, ಧಾರವಾಡ ಜಿಲ್ಲೆಯ ಶಹರ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಶಿವಾನಂದ ಮನ್ಕರ್ ಕೋಟಿ ಒಡೆಯನಾಗಿದ್ದು, ೧.೫ ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ವಿವಿಧೆಡೆ ಎರಡು ಮನೆ, ಎಂಟು ನಿವೇಶನ, ೧೭ ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರಿನ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕುಂದುಕೊರತೆ ನಿರ್ವಹಣಾ ವಿಭಾಗದ ಸಂಯೋಜಕರಾಗಿರುವ ಬೂವನಹಳ್ಳಿ ನಾಗರಾಜು ಬಳಿ ೪.೯೪ ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಆರ್‌ಡಿಪಿಆರ್‌ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದ ಅವರು ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಕುಂದುಕೊರತೆ ನಿರ್ವಹಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು, ತುಮಕೂರಿನಲ್ಲಿ ಆಸ್ತಿ ಪತ್ತೆಯಾಗಿದೆ.