ನ್ಯೂಸ್

ಅಕ್ರಮವಾಗಿ ಮರ ಕಡಿಯುವಿಕೆ ನಡೆಯುತ್ತಿದೆ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್| sc

ನವದೆಹಲಿ: ಉತ್ತರ ಭಾರತದ ಹಲವಾರು ರಾಜ್ಯಗಳು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಪ್ರವಾಹ ಉಂಟಾಗಿದ್ದು, ಈ ಘಟನೆಗೆ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಮರ ಕಡಿಯುವಿಕೆ ಕಾರಣವಾಗಿದೆ. ಹಾಗಾಗಿ ಇದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದ್ದು, ಈ ಸಂಬಂಧ 2 ವಾರಗಳಲ್ಲಿ ಉತ್ತರ ನೀಡುವಂತೆ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯವು, ಪರಿಸ್ಥಿತಿ ಅತ್ಯಂತ ಗಂಭೀರವಾಗಿ ಕಾಣುತ್ತಿದೆ ಎಂದು ಎತ್ತಿ ತೋರಿಸಿದೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಹದ ನೀರಿನಿಂದ ಹೆಚ್ಚಿನ ಸಂಖ್ಯೆಯ ಮರದ ದಿಮ್ಮಿಗಳು ಕೊಚ್ಚಿ ಹೋಗುವುದನ್ನು ತೋರಿಸುವ ವಿಡಿಯೋಗಳನ್ನು ಉಲ್ಲೇಖಿಸಿದ ಪೀಠ, ಬೆಟ್ಟಗಳಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವುದು ಪ್ರಮುಖ ಕಾರಣವಾಗಿರಬಹುದು ಎಂದು ಗಮನಸೆಳೆದಿದೆ. ಇಂತಹ ದೊಡ್ಡ ಪ್ರಮಾಣದ ಪರಿಸರ ಹಾನಿಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.

ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಹಾನಿ ಸಂಭವಿಸಿರುವ ಬಗ್ಗೆ ಸಲ್ಲಿಸಲಾದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಯ ಸಮಯದಲ್ಲಿ ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ, ನಾವು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಅಭೂತಪೂರ್ವ ಭೂಕುಸಿತ ಮತ್ತು ಪ್ರವಾಹವನ್ನು ನೋಡಿದ್ದೇವೆ. ಮಾಧ್ಯಮ ವರದಿಗಳಿಂದ ಪ್ರವಾಹದಲ್ಲಿ ಅಪಾರ ಪ್ರಮಾಣದ ಮರಗಳು ನದಿಯಲ್ಲಿ ಹರಿದು ಬರುತ್ತಿರುವುದು ಗಮನಕ್ಕೆ ಬಂದಿದೆ. ಈ ದೃಶ್ಯ ಪ್ರಾಥಮಿಕವಾಗಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ ಎಂದು ತೋರುತ್ತದೆ. ಹೀಗಾಗಿ ಪ್ರತಿವಾದಿಗಳಿಗೆ ನೋಟಿಸ್ ನೀಡುವುದಾಗಿ ಆದೇಶಿಸಿದ್ದಾರೆ. ನೋಟಿಸ್​ ಸ್ವೀಕರಿಸಿದ ರಾಜ್ಯಗಳು ಎರಡು ವಾರಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.

(ಏಜೆನ್ಸೀಸ್)