ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣಕ್ಕೂ ಕಮಿಷನ್‌ಗೂ, ಗುತ್ತಿಗೆದಾರರ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿಯಾದಾಗ ಈ ವಿಷಯ ಚರ್ಚಿಸಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸಮಜಾಯಿಷಿ ನೀಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಗೆ ಒಳಗಾದ ಅಂಬಿಕಾಪತಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರೂ ಹೌದು. ಆದರೆ ಅವರು ಗುತ್ತಿಗೆದಾರಿಕೆ ಜತೆಗೆ ಗಣಿಗಾರಿಕೆ ಇನ್ನಿತರ ವ್ಯವಹಾರ ಮಾಡುತ್ತಾರೆ. ತನಿಖಾ ಸಂಸ್ಥೆಗಳು, ಕಾನೂನು ಕ್ರಮವಾಗುತ್ತದೆ. ತಪ್ಪು ಮಾಡಿದ್ದರೆ ಸಂಘದಿಂದ ಉಚ್ಛಾಟಿಸುತ್ತೇವೆ.
ಎಲ್ಲ ಗುತ್ತಿಗೆದಾರರಿಂದ ಕಮಿಷನ್ ರೂಪದಲ್ಲಿ ಪಡೆದು ಸಂಗ್ರಹಿಸಿಟ್ಟಿದ್ದ ಹಣವಲ್ಲ. ರಾಜಕೀಯ ಹೇಳಿಕೆಗೆ ನಾವು ಪ್ರತಿಕ್ರಿಯಿಸಲ್ಲ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ನಾವು ಒಪ್ಪಬಹುದು, ಬಿಡಬಹುದು ಎಂದು ಡಿ.ಕೆಂಪಣ್ಣ ಹೇಳಿದರು.
ಹಂತ ಹಂತವಾಗಿ ಬಾಕಿ ಬಿಲ್ ಮೊತ್ತ ಪಾವತಿಸಲಾಗುವುದು. ಹಬ್ಬಕ್ಕೆ ಮುನ್ನ ಒಂದಿಷ್ಟು ಮೊತ್ತ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದು ತಿಂಗಳಾಂತ್ಯದೊಳಗೆ ಅಧಿಕಾರಿಗಳನ್ನು ಕರೆದು ನಮ್ಮೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ.
ಆದರೆ ತಿಂಗಳೊಳಗೆ ಹಿರಿತನದ ಪ್ರಕಾರ ಬಿಲ್ ಪಾವತಿಸದಿದ್ದರೆ ಧರಣಿ ಹೂಡುವ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಬಿಬಿಎಂಪಿ ಕಮಿಷನರ್, ಇಂಜಿನಿಯರ್ ಇನ್ ಚೀಫ್ ಹಿಂಸೆ ಕೊಡುತ್ತಿರುವ ಬಗ್ಗೆ ದೂರು ನೀಡಿದ್ದು, ಕರೆದು ಮಾತಾಡುವೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಡಿ.ಕೆಂಪಣ್ಣ ಹೇಳಿದರು.