ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಕೋಟ್ಯಿಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ತನ್ನ ವಶಕ್ಕೆ ಪಡೆದುಕೊಂಡಿದೆ.
- ಕೋಟ್ಯಿಂತರ ರೂ. ಬೆಲೆ ಬಾಳುವ ಆಸ್ತಿ ವಶಕ್ಕೆ
ಮೈಸೂರು:ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಕೋಟ್ಯಿಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ತನ್ನ ವಶಕ್ಕೆ ಪಡೆದುಕೊಂಡಿದೆ.
ವಿಜಯನಗರ 3ನೇ ಹಂತದಲ್ಲಿ ಒತ್ತುವರಿ ಮಾಡಿಕೊಂಡಿದ್ದ 6.13 ಎಕರೆ ಜಾಗವನ್ನು ಶನಿವಾರ ಮುಂಜಾನೆ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಿತು. ವಶಪಡಿಸಿಕೊಂಡು ಆಸ್ತಿಯ ಮೌಲ್ಯ 120 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಅನಧಿಕೃತವಾಗಿ ವಾಸವಿದ್ದವರನ್ನು ಹೊರಗೆ ಕಳುಹಿಸಿ ಜಾಗದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ಗಳನ್ನು ತೆರವು ಮಾಡಲಾಯಿತು. ಆಸ್ತಿಯನ್ನು ಸಂರಕ್ಷಿಸಿದ ಅಧಿಕಾರಿಗಳು, ಫಲಕ ಅಳವಡಿಸಿದರು. ಸುತ್ತಲೂ ತಂತಿ ಬೇಲಿ ಅಳವಡಿಸಲಾಯಿತು.
ಪ್ರಾಧಿಕಾರದ ಅಧಿಕಾರಿಗಳು ತೆರವು ಕಾರ್ಯಾಚರಣೆಗೆಂದು ತೆರಳಿದಾಗ ಸ್ಥಳದಲ್ಲಿದ್ದವರು ಅಡ್ಡಿಪಡಿಸಿ ಜಗಳಕ್ಕೆ ಮುಂದಾಗಿದ್ದರು. ಅಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದ ಜೆಸಿಬಿ ಮುಂದೆ ಮಲಗಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಕೆಯೊಡ್ಡಿದರು.
ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು. ಪೊಲೀಸರು ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳನ್ನು ವ್ಯಾನ್‌ನಲ್ಲಿ ಕೂರಿಸಿಕೊಂಡು ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು.
ಎಂಡಿಎ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೂಚನೆ ಮೇರೆಗೆ ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಬಿಗಿಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಎಂಡಿಎ ಹಾಗೂ ಮೈಸೂರು ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ನೇತೃತ್ವದಲ್ಲಿ 50 ಪೊಲೀಸ್ ಸಿಬ್ಬಂದಿ ಭದ್ರತೆ ನೀಡಿದರು. ಕಾರ್ಯಾಚರಣೆಯಲ್ಲಿ ಎಂಡಿಎ ಕಾರ್ಯದರ್ಶಿ ಕೆ.ಜಾನ್ಸನ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ನಾಗೇಶ್, ಮಹೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನೀತಾ, ಭೂಸ್ವಾಧೀನ ಶಾಖೆಯ ಸಚಿನ್ ಭಾಗವಹಿಸಿದ್ದರು.
ಮೈಸೂರು ತಾಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸವೇ ನಂ. 264ರ 6.13 ಎಕರೆ ಜಾಗವನ್ನು ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ 42 ವರ್ಷಗಳ ಹಿಂದೆ ವಿಜಯನಗರ 3ನೇ ಹಂತದ ವಸತಿ ಬಡಾವಣೆ ನಿರ್ಮಿಸಲು ಭೂಸ್ವಾಧೀನ ಮಾಡಿತ್ತು.
1981ರಲ್ಲಿ ಪ್ರಾಥಮಿಕ ಹಾಗೂ 1984ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 98,670 ರೂ. ಪರಿಹಾರವನ್ನೂ ನೀಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಅರತಮ್ಮ ಕೋಂ ಮಂಡ ಅಲಿಯಾಸ್ ತಮ್ಮಯ್ಯ ಎಂಬವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣ ನಡೆಸಿದ ನ್ಯಾಯಾಲಯದಲ್ಲೂ ಮುಡಾ ಪರವಾಗಿ ತೀರ್ಪು ಬಂದಿತ್ತು.
ಈ ಜಾಗವನ್ನು ಮುಡಾ ಕ್ರೀಡಾಂಗಣಕ್ಕಾಗಿ ಮೀಸಲಿರಿಸಿತ್ತು. ಭೂಮಾಲೀಕರಿಗೆ ನಿಯಾಮನುಸಾರ ಪರಿಹಾರವನ್ನು ಒದಗಿಸಿತ್ತಾದರೂ, ಕೆಲವರು ನ್ಯಾಯಾಲಯದ ಮೊರೆ ಹೋಗಿ ಆ ಸ್ಥಳದಲ್ಲಿ ಶೆಡ್‌ಗಳನ್ನು ನಿರ್ಮಿಸಿ ಅನಧಿಕೃತವಾಗಿ ವಾಸವಿದ್ದರು.
ಈ ಹಿಂದೆ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಲು ಹಲವು ಬಾರಿ ತೆರಳಿದಾಗ ಅನಧಿಕೃತವಾಗಿ ವಾಸವಿದ್ದವರು, ತಮ್ಮ ಹಸುಗಳನ್ನು ಬಿಟ್ಟು ಬೆದರಿಸಿ ವಾಪಸ್ ಕಳುಹಿಸಿದ್ದರು. ಹಾಗಾಗಿ ಹಲವು ವರ್ಷಗಳಿಂದ ಬೆಳೆಬಾಳುವ ಪ್ರಮುಖ ಭೂಮಿಯನ್ನು ಪ್ರಾಧಿಕಾರದ ವಶಕ್ಕೆ ಪಡೆಯಲು ವಿಳಂಬವಾಗಿತ್ತು. ದಾಖಲೆಗಳೆಲ್ಲವೂ ಪ್ರಾಧಿಕಾರದ ಹೆಸರಿನಲ್ಲಿರುವ ಕಾರಣ ತೆರವುಗೊಳಿಸಿ ಆಸ್ತಿಯನ್ನು ಸಂರಕ್ಷಿಸಲಾಗಿದೆ ಕೆ.ಆರ್. ರಕ್ಷಿತ್ ತಿಳಿಸಿದ್ದಾರೆ.