ಹೈದರಾಬಾದ್: ಆನ್‌ಲೈನ್‌ನಲ್ಲಿ ಜೂಜಾಟಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟ ರಾಣಾ ದಗ್ಗುಬಾಟಿ ಅವರು ಹೈದರಾಬಾದ್ ವಲಯ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಇಂದು (ಆ.11) ವಿಚಾರಣೆಗೆ ಹಾಜರಾಗಿದ್ದಾರೆ.
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಇಡಿಯಿಂದ ನಟನಿಗೆ ಈ ಹಿಂದೆ ಸಮನ್ಸ್ ಜಾರಿ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಪ್ರಕಾಶ್ ರಾಜ್ ಜುಲೈ 30 ರಂದು ಇಡಿ ಮುಂದೆ ಹಾಜರಾಗಿದ್ದರು. ಇದರ ಜೊತೆಗೆ, ನಟಿ ಲಕ್ಷ್ಮಿ ಮಂಚು ಮತ್ತು ವಿಜಯ್ ದೇವರಕೊಂಡ ಅವರನ್ನು ಸಹ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಅಧಿಕೃತ ಮೂಲಗಳ ಪ್ರಕಾರ, ನಟರು 'ಅಕ್ರಮ' ಹಣ ಗಳಿಸುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು 'ಅನುಮೋದಿಸಿದ್ದಾರೆ' ಎನ್ನಲಾಗಿದೆ.
ಉದ್ಯಮಿ ಪಿ.ಎಂ. ಫಣೀಂದ್ರ ಶರ್ಮಾ ಅವರು ಬೆಟ್ಟಿಂಗ್ ಆ್ಯಪ್ ಪ್ರಚಾರ ಆರೋಪವನ್ನು ಮಾಡಿ ಇದೇ ವರ್ಷದ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು. ಹಾಗಾಗಿ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರಕ್ಕೆ ಸಂಬಂಧಿಸಿ ನಟರು ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ವಿರುದ್ಧ 5 ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ 29 ಸೆಲೆಬ್ರಿಟಿಗಳ ವಿರುದ್ಧ ಇ.ಡಿ (ED) ಎಫ್‌ಐಆರ್ ದಾಖಲಿಸಿತ್ತು. ಈ ಸಂಬಂಧ ಪ್ರತಿಯೊಬ್ಬ ಸೆಲೆಬ್ರಿಟಿಗಳು ಇ.ಡಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದಾರೆ.
(ಏಜೆನ್ಸೀಸ್)