ಮುಂಬೈ: ಶ್ರೀರಾಮನನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ನಾಟಕವನ್ನು ಪ್ರದರ್ಶಿಸಲಾಗಿದೆ ಎಂಬ ದೂರಿನ ಮೇರೆಗೆ ನಾಟಕದಲ್ಲಿ ಭಾಗಹಿಸಿದ್ದ 8 ವಿದ್ಯಾರ್ಥಿಗಳಿಗೆ 1.2 ಲಕ್ಷ ರೂಪಾಯಿ ದಂಡ ವಿಧಿಸಿ ಬಾಂಬೆ ಐಐಟಿ ನೋಟಿಸ್ ನೀಡಿದೆ.
ಮಾರ್ಚ್ 31 ರಂದು ನಡೆದ ಕಲಾ ಉತ್ಸವ ಕಾರ್ಯಕ್ರಮದ ವೇಳೆ 'ರಾಹೋವಣ' ಎಂಬ ಹೆಸರಿನ ನಾಟಕವನ್ನು ಪ್ರದರ್ಶಿಸಿದ್ದರು. ಎಂಟು ವಿದ್ಯಾರ್ಥಿಗಳಿಗೆ ದಂಡ ವಿಧಿಸಿರುವ ಬಗ್ಗೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಪಿಪಿಎಸ್ಸಿಯಲ್ಲಿ ಸಕ್ರಿಯರಾಗಿರುವ ವಿದ್ಯಾರ್ಥಿಯೊಬ್ಬರು ಖಚಿತಪಡಿಸಿದ್ದಾರೆ.
ಪೂಜ್ಯ ಹಿಂದೂ ಮಹಾಕಾವ್ಯ ರಾಮಾಯಣವನ್ನು ಸಡಿಲವಾಗಿ ಆಧರಿಸಿದೆ. ಹಿಂದೂ ನಂಬಿಕೆಗಳು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಹೊಂದಿದೆ ಎಂದು ಆರೋಪಿಸಿ ಸಂಸ್ಥೆಯ ವಿದ್ಯಾರ್ಥಿಗಳ ಒಂದು ಗುಂಪು ನಾಟಕದ ವಿರುದ್ಧ ದೂರು ನೀಡಿತ್ತು. “ಸ್ತ್ರೀವಾದವನ್ನು ಉತ್ತೇಜಿಸುವ” ಸೋಗಿನಲ್ಲಿ ನಾಟಕವು ಪ್ರಮುಖ ಪಾತ್ರಗಳನ್ನು, ಸಾಂಸ್ಕೃತಿಕ ಮೌಲ್ಯಗಳನ್ನು ಅಪಹಾಸ್ಯ ಮಾಡಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು. ದೂರುಗಳು ಮೇ 8 ರಂದು ಶಿಸ್ತು ಸಮಿತಿ ಸಭೆಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ದಂಡ ಹಾಕಲಾಗಿದೆ.
ದೂರಿನ ಮೇರೆಗೆ ಎಂಟು ವಿದ್ಯಾರ್ಥಿಗಳಿಗೆ 1.20 ಲಕ್ಷ ರೂಪಾಯಿ (ತಲಾ 40 ಸಾವಿರ ರೂಪಾಯಿ) ದಂಡ ವಿಧಿಸಿ ಜೂನ್ 4 ರಂದು ಬಾಂಬೆ ಐಐಟಿ ರಿಜಿಸ್ಟ್ರಾರ್ ಕಚೇರಿ ನೋಟಿಸ್ ನೀಡಿತ್ತು. ದಂಡವನ್ನು ಜುಲೈ 30 ರೊಳಗೆ ಪಾವತಿಸುವಂತೆ ಸೂಚಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಲು ಐಐಟಿ ಬಾಂಬೆ ನಿರಾಕರಿಸಿದೆ. ನಾಟಕದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳ ಗುಂಪೊಂದು ಕಾಲೇಜು ಆಡಳಿತ ಮಂಡಳಿಗೆ ಏಪ್ರಿಲ್ 8 ರಂದು ದೂರು ಸಲ್ಲಿಸಿದ್ದರು. ಅಲ್ಲದೇ ನಾಟಕವನ್ನು ಹಿಂದೂಪೋಬಿಯಾ ಎಂದು ಕರೆದಿದ್ದರು.