ನ್ಯೂಸ್

ಮಹಾಕುಂಭ ಮೇಳದಿಂದ ಹೊರನಡೆದ ಐಐಟಿ ಬಾಬಾ! ಇದಕ್ಕೆ ಕಾರಣ ವದಂತಿಗಳು? ಕಡೆಗೂ ಸ್ಪಷ್ಟನೆ ಕೊಟ್ಟ ಅಭಯ್​ ಸಿಂಗ್ | IIT Baba

IIT Baba: ಮಹಾಕುಂಭ ಮೇಳ ಶುರುವಾದ ಮೊದಲ ದಿನದಿಂದಲೂ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಐಐಟಿ ಬಾಬಾ ಎಂದೇ ಖ್ಯಾತಿ ಪಡೆದಿರುವ ಅಭಯ್ ಸಿಂಗ್, ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ. ಅಪಾರ ಜ್ಞಾನ, ಹಲವು ವಿದ್ಯೆಗಳಲ್ಲಿ ಪಂಡಿತರಾಗಿರುವ ಅಭಯ್ ಸಿಂಗ್ (ಐಐಟಿ ಬಾಬಾ), ಹೆಚ್ಚಿನ ಸಂಬಳದ ಉದ್ಯೋಗವನ್ನೆಲ್ಲ ಬಿಟ್ಟು ಆಧ್ಯಾತ್ಮದತ್ತ ಮುಖ ಮಾಡಿರುವುದು ಅವರ ಬಹುತೇಕರ ಅಚ್ಚರಿಗೆ ಕಾರಣವಾಗಿದೆ. ಜಾಲತಾಣಗಳಲ್ಲಿ ವೈರಲ್ ಆಗಿರುವ ಐಐಟಿ ಬಾಬಾ ತನ್ನ ವೈಚಾರಿಕತೆ, ಅಧ್ಯಯನ, ಅಪಾರ ಜ್ಞಾನಕ್ಕೆ ಹೆಸರುವಾಸಿ ಆಗಿದ್ದರೂ ತನ್ನ ತಂದೆ-ತಾಯಿಯ ಕಣ್ಣೀರಿಗೆ ಕಾರಣರಾಗಿದ್ದೇ ಸದ್ಯ ಕುಂಭಮೇಳದಿಂದ ಹೊರ ಹೋಗಲು ಕಾರಣ ಎನ್ನಲಾಗುತ್ತಿದೆ.

ಅಭಯ್​ರ ಮನಸ್ಥಿತಿ, ನೆಮ್ಮದಿ ಹಾಳು

ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡ ಅಭಯ್ ಸಿಂಗ್, ಕೇವಲ ಒಂದೇ ದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಐಐಟಿ ಬಾಬಾ ಎಂಬ ಹೆಸರಿನಿಂದ ಭಾರೀ ವೈರಲ್ ಆದರು. ಇದರಿಂದ ಕುಂಭ ಮೇಳದಲ್ಲಿ ಜನರಿಂದ ಹೆಚ್ಚಿನ ಪ್ರಶಂಸೆ ಮತ್ತು ಜನಪ್ರಿಯತೆ ಗಳಿಸಿದ ಐಐಟಿ ಬಾಬಾ, ಇದೀಗ ದಿಢೀರ್ ಎಂಬಂತೆ ಅಲ್ಲಿಂದ ಕಾಣೆಯಾಗಿದ್ದಾರೆ ಎಂದು ಒಂದಷ್ಟು ವರದಿಗಳು ಉಲ್ಲೇಖಿಸಿವೆ. ಮನೆಗೆ ಹಿಂತಿರುಗುವಂತೆ ಹೆತ್ತವರು ಕಣ್ಣೀರಿಟ್ಟಿದ್ದು ಹಾಗೂ ಕೆಲವು ಮಾಧ್ಯಮಗಳ ನಿರಂತರ ಪ್ರಶ್ನೆಗಳು ಅಭಯ್​ರ ಮನಸ್ಥಿತಿ, ನೆಮ್ಮದಿ ಹಾಳು ಮಾಡಿದೆ. ಇದರಿಂದ ಬೇಸತ್ತು ಆತ ಡ್ರಗ್ಸ್​ ಮೊರೆ ಕೂಡ ಹೋಗಿದ್ದಾರೆ ಎಂದು ಕೆಲವು ಆಶ್ರಮದ ಸಾಧುಗಳು ಹೇಳಿದ್ದಾರೆ. ತನ್ನ ನಾಪತ್ತೆ ಮತ್ತು ವದಂತಿಗಳಿಗೆ ಕಡೆಗೂ ಐಐಟಿ ಬಾಬಾ ಪ್ರತಿಕ್ರಿಯಿಸಿ, ಸ್ಪಷ್ಟನೆ ನೀಡಿದ್ದಾರೆ.

ಮಹಾಕುಂಭ ಮೇಳದಿಂದ ಹೊರಬರಲು ಇದೇ ಕಾರಣ

ಕುಂಬ ಮೇಳದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಿಂದ ಬಾಬಾ ದಿಢೀರ್​ ಕಣ್ಮರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಅಭಯ್ ಸಿಂಗ್, "ಇವೆಲ್ಲವೂ ಶುದ್ಧ ಸುಳ್ಳು. ನಾನಿನ್ನು ಮಹಾಕುಂಭ ಮೇಳದ ಭಾಗವಾಗಿದ್ದೇನೆ. ಅಷ್ಟಕ್ಕೂ ನನ್ನನ್ನು ಆಶ್ರಮದಿಂದ ಹೊರಟು ಹೋಗುವಂತೆ ಒತ್ತಾಯಿಸಿದರು. ಹಾಗಾಗಿ ಅಲ್ಲಿಂದ ಹೊರಬಂದೆ ಅಷ್ಟೇ. ಮದಿ ಆಶ್ರಮದ ನಿರ್ವಾಹಕರು ರಾತ್ರಿಯಂದು ನನ್ನನ್ನು ಹೊರ ಹೋಗುವಂತೆ ಆದೇಶಿಸಿದರು. ನನಗೆ ಜನಪ್ರಿಯತೆ ಸಿಗುತ್ತಿರುವ ಹಿನ್ನಲೆ, ಅವರ ಬಗ್ಗೆಗಿನ ಯಾವುದಾದರೂ ವಿಷಯಗಳನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಬಹುದು ಎಂಬುದು ಅವರ ಚಿಂತೆ. ಅದಕ್ಕೆ ಹೋಗಿ ಎಂದಿದ್ದಾರೆ" ಎಂದು ಐಐಟಿ ಬಾಬಾ ಹೇಳಿದ್ದಾರೆ,(ಏಜೆನ್ಸೀಸ್).