ನ್ಯೂಸ್

ಕೆಎಫ್​ಡಿಗೆ ಐಐಎಸ್ಸಿ ಪರಿಹಾರ: ಮಂಗನ ಕಾಯಿಲೆಗೆ ಸಿಗುವುದೇ ಮದ್ದು, ವಿವಿಧ ಆಯಾಮದಲ್ಲಿ ಸಂಶೋಧನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಶಿವಮೊಗ್ಗ: ಮಲೆನಾಡಿನಲ್ಲಿ ಆರು ದಶಕಗಳಿಂದ ಕಾಡುತ್ತಿರುವ ಕೆಎಫ್​ಡಿಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಶಾಶ್ವತ ಪರಿಹಾರ ಹುಡುಕಲು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧನೆಗೆ ಮುಂದಾಗಿದ್ದು, ಮಂಗನ ಕಾಯಿಲೆ ನಿಮೂಲನೆಗೆ ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ.

ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು, ಐಐಎಸ್ಸಿ ಪ್ರಮುಖರು, ಪುಣೆಯ ಎನ್​ಐವಿ ಮುಖ್ಯಸ್ಥರ ನಡುವೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದ್ದು, ಕೆಎಫ್​ಡಿ ಬಗ್ಗೆ ಸಂಶೋಧನೆ ಕೈಗೊಳ್ಳಲು ಐಐಎಸ್ಸಿ ಸಹಮತ ವ್ಯಕ್ತಪಡಿಸಿದೆ. ಇದುವರೆಗೆ ಕೆಎಫ್​ಡಿ ಬಗ್ಗೆ ಸಮರ್ಪಕ ಸಂಶೋಧನೆಗಳೇ ನಡೆದಿರಲಿಲ್ಲ. ಇದು ಕಾಯಿಲೆ ನಿಯಂತ್ರಣಕ್ಕೆ ಪ್ರಮುಖ ಹಿನ್ನಡೆಯಾಗಿತ್ತು. ರೋಗ ನಿರೋಧಕ ಲಸಿಕೆ ನೀಡುವುದಷ್ಟೇ ಪರಿಹಾರವಾಗಿತ್ತು. ಈಗ ಸಮಗ್ರ ಸಂಶೋಧನೆ ಮೂಲಕ ಸಂಪೂರ್ಣವಾಗಿ ಕೆಎಫ್​ಡಿ ನಿಮೂಲನೆ ಮಾಡಲು ಆರೋಗ್ಯ ಇಲಾಖೆ ಐಐಎಸ್ಸಿ ಮೊರೆ ಹೋಗಿದೆ.

ಸಂಶೋಧನೆ ಆಯಾಮ: ಕೆಎಫ್​ಡಿ ವೈರಾಣುಗೆ ಕಾರಣವಾದ ಉಣ್ಣೆಗಳು, ಅವುಗಳನ್ನು ಹರಡುವ ಮಂಗಗಳ ಸಾವಿನ ಆಧಾರದಲ್ಲಿ ಮಾದರಿ ಸಂಗ್ರಹಿಸಿ ವೈರಾಣುವಿನ ಇರುವಿಕೆ ಪತ್ತೆ ಮಾಡಲಾಗುತ್ತಿದೆ. ಇದಕ್ಕೆ ಬೇರೆ ಕಾರಣಗಳು ಇವೆಯೇ? ವೈರಾಣುವಿನ ಸಾಮರ್ಥ್ಯ ಹಾಗೂ ಸಾಂದ್ರತೆ ತಗ್ಗಿಸುವುದು ಸಾಧ್ಯವಿಲ್ಲವೇ? ಎಂಬ ಆಯಾಮದಲ್ಲೂ ಸಂಶೋಧನೆ ನಡೆಯಲಿದೆ. ಪ್ರಸ್ತುತ ಉಣ್ಣೆಗಳ ಕಾಟದಿಂದ ಮುಕ್ತಿ ಪಡೆಯಲು ಬಳಸುತ್ತಿರುವ ಡಿಎಂಪಿ ತೈಲ ಹಾಗೂ ರೋಗ ನಿರೋಧಕ ಲಸಿಕೆ ಬದಲು ಇನ್ನಷ್ಟು ಸುಧಾರಿತ ಔಷಧೋಪಚಾರ ಕಂಡು ಹಿಡಿಯುವ ನಿಟ್ಟಿನಲ್ಲೂ ಸಂಶೋಧನೆ ನಡೆಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಒಂದೆರಡು ತಿಂಗಳಲ್ಲಿ ಐಐಎಸ್ಸಿ ಸಂಶೋಧನೆ ಆರಂಭವಾಗಲಿದೆ.

ಬ್ರಿಟನ್ ತಂಡದಿಂದಲೂ ರೀಸರ್ಚ್: ಬ್ರಿಟನ್​ನ ಮೆಡಿಕಲ್ ರೀಸರ್ಚ್ ಕೌನ್ಸಿಲ್ ಸೂಚನೆ ಮೇರೆಗೆ ಅಲ್ಲಿನ ಸೆಂಟರ್ ಫಾರ್ ಎಕಾಲಜಿ ಆಂಡ್ ಹೈಡ್ರಾಲಜಿಯ ಡಾ. ಬೆತ್​ಪರ್ಸೆ, ಡಾ.ಸಾರ್ಹಾ, ಡಾ.ಜಿಲ್ ಅವರು ಕೆಎಫ್​ಡಿ ಬಗ್ಗೆ 3 ವರ್ಷಗಳಿಂದ ಸಂಶೋಧನೆ ಕೈಗೊಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರದಲ್ಲೂ ಸಂಶೋಧನೆ ಕೈಗೊಂಡಿದ್ದಾರೆ.

45 ಗ್ರಾಮಗಳಲ್ಲಿ ಕಟ್ಟೆಚ್ಚರ

2019ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್​ಡಿಗೆ 23 ಮಂದಿ ಬಲಿಯಾಗಿದ್ದರು. ಈ ಅನಾಹುತವನ್ನು ಗಮನದಲ್ಲಿರಿಸಿಕೊಂಡು ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನ 45 ಗ್ರಾಮಗಳು, 16 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಅರಳಗೋಡು, ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಾಗರ ಹಾಗೂ ತೀರ್ಥಹಳ್ಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ಹಾಸಿಗೆಗಳ ಪ್ರತ್ಯೇಕ ವಾರ್ಡ್​ನ್ನು ಮಂಗನ ಕಾಯಿಲೆ ಚಿಕಿತ್ಸೆಗೆ ಮೀಸಲಿರಿಸಲಾಗಿದೆ.

ಒಬ್ಬರಲ್ಲಿ ವೈರಾಣು ಪತ್ತೆ

ಈ ಋತುವಿನಲ್ಲಿ ರಕ್ತ ಪರೀಕ್ಷೆಗೊಳಪಟ್ಟ 535 ಮಂದಿ ಪೈಕಿ ಒಬ್ಬರಲ್ಲಿ ಕೆಎಫ್​ಡಿ ವೈರಾಣು ಪತ್ತೆಯಾಗಿದೆ. ಮಂಡಗದ್ದೆ ಸಮೀಪದ ಹೆಮ್ಮತ್ತಿಯ ನರಸಿಂಹ ಅವರಲ್ಲಿ ಕೆಎಫ್​ಡಿ ವೈರಾಣು ಪತ್ತೆಯಾಗಿದ್ದು, ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಹೆಮ್ಮತ್ತಿ ಗ್ರಾಮದಲ್ಲಿನ ಎಲ್ಲರೂ ಕೆಎಫ್​ಡಿ ನಿರೋಧಕ ಲಸಿಕೆ ಪಡೆದಿದ್ದರು. ಆದರೆ ನರಸಿಂಹ ಮಾತ್ರ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಂಗನ ಕಾಯಿಲೆ ಬಗ್ಗೆ ವಿವಿಧ ಆಯಾಮಗಳಲ್ಲಿ ಸಂಶೋಧನೆ ನಡೆಸಲು ಐಐಎಸ್ಸಿ ವಿಜ್ಞಾನಿಗಳು ಸಹಮತ ವ್ಯಕ್ತಪಡಿಸಿದ್ದಾರೆ. ಕೆಎಫ್​ಡಿ ನಿಮೂಲನೆ ದೃಷ್ಟಿಯಿಂದ ಇದೊಂದು ಮಹತ್ತರ ಹೆಜ್ಜೆ. | ಡಾ.ರಾಜೇಶ್ ಸುರಗೀಹಳ್ಳಿ, ಡಿಎಚ್​ಒ

ಮುನ್ನೆಚ್ಚರಿಕೆ ಏನು?

  • ಕೆಎಫ್​ಡಿ ನಿರೋಧಕ ಲಸಿಕೆ ಹಾಕಿಸಿಕೊಳ್ಳಬೇಕು.
  • ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನ ಜನ, ಅರಣ್ಯ ಸಿಬ್ಬಂದಿಯೂ ಎಚ್ಚರ ವಹಿಸಬೇಕು.
  • ಜ್ವರ ಕಾಣಿಸಿಕೊಂಡಾಗ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಕಾಣಬೇಕು.
  • ಕಾಡಿಗೆ ತೆರಳುವ ವೇಳೆ ಡಿಎಂಪಿ ತೈಲ ಬಳಸಬೇಕು.
  • ಬಟ್ಟೆಯಲ್ಲಿ ಉಣ್ಣೆ ಇಲ್ಲದಂತೆ ನೋಡಿಕೊಳ್ಳಬೇಕು.
  • ಹಸುಗಳ ಮೈಮೇಲೆ ಉಣ್ಣೆಗಳು ಇಲ್ಲದಂತೆ ಶುಚಿಯಾಗಿಡಬೇಕು.

| ಅರವಿಂದ ಅಕ್ಲಾಪುರ