ಬೆಂಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆರನೇ ವರ್ಷದ ಶೈಕ್ಷಣಿಕ ರ‍್ಯಾಂಕಿಂಗ್ ಬಿಡುಗಡೆ ಮಾಡಲಾಗಿದ್ದು, ಸಮಗ್ರ ದೃಷ್ಟಿಕೋನದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ(ಐಐಎಸ್ಸಿ) ಎರಡನೇ ಸ್ಥಾನ ಪಡೆದಿದೆ. ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟು(ಎನ್ಐಆರ್ಎಫ್) ರೂಪಿಸಿರುವ ಫಲಿತಾಂಶಗಳನ್ನು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ಐಐಟಿ ಮದ್ರಾಸ್ ಸತತ ಮೂರನೆ ವರ್ಷ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ವಿಶ್ವವಿದ್ಯಾಲಯ ರ್ಯಾಂಕಿಂಗ್ನಲ್ಲಿ ಐಐಎಸ್ಸಿ, ಕಾನೂನು ಕಾಲೇಜುಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ, ದಂತ ವೈದ್ಯಕೀಯ ವಿಭಾಗದಲ್ಲಿ ಮಣಿಪಾಲದ ಮಣಿಪಾಲ್ ದಂತ ವೈದ್ಯಕೀಯ ಸಂಸ್ಥೆ ಮೊದಲ ಸ್ಥಾನ ಗಳಿಸಿವೆ.
ಟಾಪ್ 5ರಲ್ಲೂ ಇಲ್ಲ: ಮೂರು ವಿಭಾಗಗಳಲ್ಲಿ ಮೊದಲ 5 ಸಂಸ್ಥೆಗಳಲ್ಲೂ ಕರ್ನಾಟಕದ ಯಾವುದೇ ಹೆಸರುಗಳಿಲ್ಲ. ಫಾರ್ಮಸಿ ವಿಭಾಗದಲ್ಲಿ ಉಡುಪಿಯ ಮಣಿಪಾಲ್ ಕಾಲೇಜ್ ಆಫ್ ಫಾರ್ವಸ್ಯುಟಿಕಲ್ ಸೈನ್ಸಸ್ 8ನೇ ಸ್ಥಾನದಲ್ಲಿದೆ. ಕಾಲೇಜು ವಿಭಾಗ ದಲ್ಲಿ ಎಂ.ಎಸ್. ರಾಮಯ್ಯ ಕಲೆ, ವಿಜ್ಞಾನ, ವಾಣಿಜ್ಯ ಕಾಲೇಜು 62ನೇ ಸ್ಥಾನ ದಲ್ಲಿದೆ. ವಾಸ್ತುಶಾಸ್ತ್ರ ವಿಭಾಗ ದಲ್ಲಿ ಬಿಎಂಎಸ್ ಆರ್ಕಿಟೆಕ್ಚರ್ ಕಾಲೇಜು 15ನೇ ಸ್ಥಾನದಲ್ಲಿದೆ.
ಆಯ್ಕೆಯಾದ ಸಂಸ್ಥೆಗಳು: ಇಂಜಿನಿಯರಿಂಗ್ ವಿಭಾಗದಲ್ಲಿ 200, ಸಮಗ್ರ-ವಿವಿ-ಕಾಲೇಜು ವಿಭಾಗದಲ್ಲಿ ತಲಾ 100, ಮ್ಯಾನೇಜ್ವೆುಂಟ್ ಹಾಗೂ ಫಾರ್ಮಸಿ ವಿಭಾಗದಲ್ಲಿ ತಲಾ 75, ವೈದ್ಯಕೀಯ ಹಾಗೂ ಸಂಶೋಧನೆ ವಿಭಾಗದಲ್ಲಿ ತಲಾ 50, ದಂತ ವೈದ್ಯಕೀಯದಲ್ಲಿ 40, ಕಾನೂನು ವಿಭಾಗದಲ್ಲಿ 30 ಹಾಗೂ ವಾಸ್ತುಶಾಸ್ತ್ರ ವಿಭಾಗದಲ್ಲಿ 25 ಸಂಸ್ಥೆಗಳಿಗೆ ರ‍್ಯಾಂಕಿಂಗ್ ನೀಡಲಾಗಿದೆ.
ಉತ್ಕೃಷ್ಟ ಗುಣಮಟ್ಟದ ರ‍್ಯಾಂಕಿಂಗ್ ವ್ಯವಸ್ಥೆಯಿಂದಾಗಿ, ಜಾಗತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತದ ಕೊಡುಗೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಅವಕಾಶ ನೀಡಿದೆ. ಅಖಿಲ ಭಾರತದ ಜತೆಗೆ ಪ್ರಾದೇಶಿಕ ಮಟ್ಟದಲ್ಲೂ ರ‍್ಯಾಂಕಿಂಗ್ ಅಭಿವೃದ್ಧಿಪಡಿಸಬೇಕಿದೆ.
| ಧಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ