ನ್ಯೂಸ್

ಸಿಎಂ-ಡಿಸಿಎಂ ಹುದ್ದೆಗಳ ಪೈಪೋಟಿಯಲ್ಲಿ ಅಭಿವೃದ್ಧಿ ಕಡೆಗಣನೆ: ಸಚಿವೆ ಶೋಭಾ ಕರಂದ್ಲಾಜೆ ಟೀಕೆ

ಬೆಂಗಳೂರು: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳ ಕಿತ್ತಾಟ, ಅಧಿಕಾರ ಹಂಚಿಕೆ ಜಗಳದಲ್ಲಿ ರಾಜ್ಯದ ಅಭಿವೃದ್ಧಿ, ಹಿತ ಕಡೆಗಣಿಸಲ್ಪಟ್ಟಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಸಿಎಂ, ಡಿಸಿಎಂ ಪೈಪೋಟಿಯಲ್ಲಿ ಮುಖ್ಯ ಉದ್ದೇಶವನ್ನು ಸರ್ಕಾರ ಮರೆತಿದೆ. ಅತ್ಯಾಚಾರ, ಹಲ್ಲೆ, ದೌರ್ಜನ್ಯಗಳು ಹಾಡಹಗಲೇ ನಡೆಯುತ್ತಿದ್ದು ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ವಾಗ್ದಾಳಿ ಮಾಡಿದರು.

ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ನಿರ್ಲಕ್ಷಿಸಿದ ಸರ್ಕಾರ, ಜನರ ಆರೋಗ್ಯ ರಕ್ಷಣೆ ಬಗ್ಗೆಯೂ ಅದೇ ತಾತ್ಸಾರ ನಿಲುವು ತಳೆದಿದೆ. ಮಳೆಗಾಲದಲ್ಲಿ ಹರಡಬಹುದಾದ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಸರ್ಕಾರವೇ ಕಾರಣ

ರಾಜ್ಯದಲ್ಲಿ ಡೆಂಘೆ ಕಾಯಿಲೆ ಹೆಚ್ಚಾಗುವುದಕ್ಕೆ ಸರ್ಕಾರದ ಅವ್ಯವಸ್ಥೆಯೇ ಕಾರಣ. ಝೀಕಾ ವೈರಸ್ ಕೂಡ ಬಂದಿದ್ದು, ಜನರು ಆತಂಕದಲ್ಲಿದ್ದರೆ ಆರೋಗ್ಯ ಇಲಾಖೆ ನಿದ್ದೆಗೆ ಜಾರಿದೆ ಎಂದು ದೂಷಿಸಿದರು.

ನಿಂತ ನೀರಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಈ ಕಾಯಿಲೆ ಹರಡುತ್ತದೆ ಎಂದು ಗೊತ್ತಿದ್ದರೂ ಸ್ವಚ್ಛತೆಗೂ ಕ್ರಮವಹಿಸಿಲ್ಲ. ಇದರಿಂದಾಗಿ ಆಸ್ಪತ್ರೆಗಳಿಗೆ ಡೆಂಘೆ ರೋಗಿಗಳು ದಾಖಲಾಗುವ ಸಂಖ್ಯೆ ಹೆಚ್ಚುತ್ತಿದ್ದು, ಜನರು ಆತಂಕದಲ್ಲಿದ್ದಾರೆ ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕೂಡಲೇ ಮಧ್ಯೆ ಪ್ರವೇಶಿಸಿ ವಸ್ತುಸ್ಥಿತಿ ಪರಿಶೀಲಿಸಿ, ನಿಯಂತ್ರಣ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಪರೀಕ್ಷೆ, ಚಿಕಿತ್ಸೆಗೆ ಹೆಚ್ಚಿನ ದರ ವಸೂಲಿ ದೂರು ಗಂಭೀರವಾಗಿ ಪರಿಗಣಿಸಿ ಕ್ರಮವಹಿಸಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದರು.