ನ್ಯೂಸ್

ಫತ್ವಾ ನಿರಾಕರಿಸಿ, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ: ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ನವದೆಹಲಿ: ಮುಸ್ಲಿಂ ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿಗೆ ಪ್ರವೇಶಿಸಲು ಸ್ವತಂತ್ರರು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅಫಿಡವಿಟ್​ ಸಲ್ಲಿಸಿದ ಮಂಡಳಿ, ಇಸ್ಲಾಂ ಧರ್ಮ ಮಹಿಳೆಯನ್ನು ಮಸೀದಿ ಪ್ರವೇಶಿಸಲು ತಡೆಯುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಫತ್ವಾಗಳನ್ನು ಬಿಟ್ಟುಬಿಡಿ. ಆದರೆ ಪುರುಷರಂತೆ ಮಹಿಳೆಯರು ಶುಕ್ರವಾರ ಪ್ರಾರ್ಥನೆ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಒತ್ತಿ ಹೇಳಿದೆ.

ಮಹಾರಾಷ್ಟ್ರ ಮೂಲದ ದಂಪತಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್​ನ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಅರ್ಜಿಯಲ್ಲಿ ಮುಸ್ಲಿಂ ಮಹಿಳೆಯರು ಮಸೀದಿಯನ್ನು ಪ್ರವೇಶಿಸಬೇಕೇ ಬೇಡವೇ ಎಂದು ನಿರ್ಣಯಿಸಲು ಕೇಳಿ ಕೊಳ್ಳಲಾಗಿತ್ತು. ಜತೆಗೆ ಇದು ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದಂತೆ. ಅಲ್ಲದೆ, ಇದು ಮೂಲ ಹಕ್ಕುಗಳ ಉಲ್ಲಂಘನೆಯೂ ಹೌದು ಎಂದು ಹೇಳಲಾಗಿತ್ತು.

ಜಮಾತ್​ ಎ ಇಸ್ಲಾಮಿ ಮತ್ತು ಮುಜಾಹಿದ್​ ಪಂಗಡಗಳು ಮಾತ್ರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತವೆ. ಆದರೆ ಅದೂ ಬೇರೆ ಬೇರೆ ದ್ವಾರಗಳ ಮೂಲಕ ಪ್ರವೇಶಿಸುವ ನಿರ್ಬಂಧವಿದೆ ಎಂದು ಅರ್ಜಿಯಲ್ಲಿ ಅಪಾದಿಸಲಾಗಿತ್ತು. (ಏಜೆನ್ಸೀಸ್​)