ಈ ವಚನದಲ್ಲಿ ಪುರಾಣಿಕರು ಜಗತ್ತಿನ ಪೂರ್ಣ ಚಿತ್ರಣವನ್ನು ನೀಡುತ್ತಾರೆ. ಆತ್ಮಜ್ಞಾನಕ್ಕೆ ದಾರಿದೀಪವಾಗುತ್ತಾರೆ. ವಿದ್ಯೆ ಬಂದಾಗ ವಿನಯ ಹೋಗುತ್ತದೆ. ಬುದ್ಧಿ ಬಂದಾಗ ಶ್ರದ್ಧೆ ಹೋಗುತ್ತದೆ. ಶ್ರದ್ಧೆ ಬಂದಾಗ ವಿವೇಚನೆ ಹೋಗುತ್ತದೆ. ಸಮೃದ್ಧಿ ಬಂದಾಗ ಸಂಸ್ಕೃತಿ ಹೋಗುತ್ತದೆ. ವಿಜ್ಞಾನ ಬಂದಾಗ ಸಮಾಧಾನ ಹೋಗುತ್ತದೆ. ಶರೀರ ಸ್ವಾಸ್ಥ್ಯ ಬಂದಾಗ ಚಿತ್ತದ ಅಂದರೆ ಮನಸ್ಸು ಬುದ್ಧಿಯ ಸ್ವಾಸ್ಥ್ಯವು ಹೋಗುತ್ತದೆ.
ದೀರ್ಘಾಯುಷ್ಯ ಬಂದಾಗ ಜೀವನ ಸ್ವಾರಸ್ಯ ಹೋಗು ತ್ತದೆ. ಬೋಧನೆ ಬಂದಾಗ ಸಾಧನೆ ಹೋಗುತ್ತದೆ. ಮಾತು ಬಂದಾಗ ಕೃತಿ ಅಂದರೆ ಕರ್ತವ್ಯಪ್ರಜ್ಞೆ ಹೋಗುತ್ತದೆ. ಜಾತಿ ಬಂದಾಗ ಪ್ರೀತಿ ಹೋಗುತ್ತದೆ. ಸ್ವಾತಂತ್ರ್ಯ ಬಂದಾಗ ಸೌಜನ್ಯ ಹೋಗುತ್ತದೆ ಎಂದು ಹೇಳುತ್ತಾರೆ.
ಕೊನೆಯ ಸಾಲಿನಲ್ಲಿ ವೇದಾಂತದ ಉತ್ತಮೋತ್ತಮವಾದ ಉಪದೇಶವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಲು ಸುಲಭವಾಗಲು ಸಿದ್ಧಯ್ಯ ಪುರಾಣಿಕ ಬಂದಾಗ ಸ್ವತಂತ್ರಧೀರ ಸಿದ್ಧೇಶ್ವರನು ಹೋಗುತ್ತಾನೆ ಎನ್ನುತ್ತಾರೆ. ಇದರರ್ಥ ಅಹಂಕಾರವು ಬಂದಾಗ ಪರಮಾತ್ಮ ನಮ್ಮಿಂದ ದೂರವಾಗುತ್ತಾನೆ ಎಂಬುದು.
ವೇದಾಂತವು ‘ಅಹಂ ಬ್ರಹ್ಮಾಸ್ಮಿ’ ಎಂಬ ಬೋಧನೆಯನ್ನು ಮಾಡುತ್ತದೆ. ಆದರೆ ಬ್ರಹ್ಮಸ್ವರೂಪವಾದ ನಾವು ತೋರಿಕೆಯ ನಾಮರೂಪಕ್ಕೆ ಬಲಿಪಶುಗಳಾಗಿ ಬ್ರಹ್ಮಸ್ವರೂಪವನ್ನು ಮರೆಯುತ್ತೇವೆ. ಅದು ನಷ್ಟವಾಗಿಲ್ಲ ಆದರೆ ಮರೆಯಾಗಿದೆ. ಹೀಗಾಗಿ ಡಿ.ವಿ.ಜಿ. ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ‘ಮರೆತಿಹನೆ ಬೊಮ್ಮ ಮರೆತಿಲ್ಲ ಮರೆತವೊಲಿಹನು ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್...’ ಎನ್ನುತ್ತಾರೆ.
ಇದರರ್ಥ ನಾವು ಸಂಪೂರ್ಣವಾಗಿ ಮರೆತಿಲ್ಲ. ಮರೆತಂತೆ ಇದ್ದೇವೆ. ಎಂದು ನಾವು ವಾಸ್ತವವನ್ನು ಅರಿಯುತ್ತೇವೋ ಅಂದು ಸುಖವನ್ನು ಹೊಂದುತ್ತೇವೆ ಎಂದು. ಸಿದ್ಧಯ್ಯ ಪುರಾಣಿಕರ ಈ ವಚನದ ಸಾಲುಗಳು ನಮಗೆ ಲೌಕಿಕ ಜಗತ್ತಿನ ಪರಿಚಯವನ್ನು ಮಾಡಿಸುತ್ತ ಅಧ್ಯಾತ್ಮದ ಸಾರವನ್ನು ಬೋಧಿಸುತ್ತದೆ. ಅಹಂಕಾರವು ಇಲ್ಲವಾದಾಗ ಅಲ್ಲಿಯೇ ಪರಮಾತ್ಮನ ಆವಿರ್ಭಾವವಾಗುತ್ತದೆ.