ಕೋಲ್ಕತಾ: ಅಂಫಾನ್ ಚಂಡಮಾರುತದಿಂದ ರಾಜ್ಯದಲ್ಲಾಗಿರುವ ಅಪಾರ ಅನಾಹುತವನ್ನು ಸರಿಪಡಿಸಲು ತಾವು ಹಗಲಿರುಳೂ ಶ್ರಮಿಸುತ್ತಿದ್ದು, ಇದು ಟೀಕೆಗೆ ಸಮಯವಲ್ಲ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾಳ್ಮೆಯಿಂದಿರುವಂತೆ ಎಲ್ಲರನ್ನು ಕೋರಿದ್ದಾರೆ.
‘ನಾನಾಗಲೀ ನನ್ನ ತಂಡವಾಗಲೀ ಮೂರು ದಿನಗಳಿಂದ ನಿದ್ದೆಯನ್ನೇ ಮಾಡಿಲ್ಲ. ನಾವೆಲ್ಲ ಹಗಲಿರುಳೂ ಕೆಲಸ ಮಾಡುತ್ತಿದ್ದೇವೆ. ಎಲ್ಲ ಅವ್ಯವಸ್ಥೆ ಸರಿಪಡಿಸಲು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಅದು ನಿಮಗೆ ಇಷ್ಟವಾಗದಿದ್ದರೆ ನನ್ನನ್ನು ಗುಂಡಿಟ್ಟು ಕೊಲ್ಲಿ ಅಥವಾ ನನ್ನ ತಲೆ ಕಡಿಯಿರಿ’ ಎಂದು ಮಮತಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಚಂಡಮಾರುತದಿಂದಾಗಿ ಕೋಲ್ಕತಾದಲ್ಲಿ ವಿದ್ಯುಚ್ಛಕ್ತಿ, ನೀರು ಸರಬರಾಜು, ಮೊಬೈಲ್ ಸೇವೆ ಮತ್ತಿತರ ಅಗತ್ಯ ಸೇವೆಗಳು ಅಸ್ತವ್ಯಸ್ತಗೊಂಡಿವೆ. 50 ಗಂಟೆಗಳ ನಂತರವೂ ಸೇವೆಗಳು ಪುನಾರಂಭಗೊಳ್ಳದಿರುವುದರಿಂದ ಜನರು ಆಕ್ರೋಶಿತರಾಗಿದ್ದಾರೆ.ಇವೆಲ್ಲವುಗಳ ಪುನಾರಂಭಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಸಿಎಂ ಮಮತಾ ಹೇಳಿದ್ದಾರೆ.